ಹಾಸನ: ಪಟಾಕಿ ಸಿಡಿದು ಸಹಕಾರಿ ಸಚಿವ ಕೆ.ಎನ್ ರಾಜಣ್ಣ ಕಣ್ಣಿಗೆ ಗಾಯ
'ಶಕ್ತಿ' ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ವೇಳೆ ಘಟನೆ
ಕುಣಿಗಲ್: ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರ ಕಣ್ಣಿಗೆ ಪಟಾಕಿ ಸಿಡಿದು ಗಾಯಗೊಂಡ ಘಟನೆ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಎನ್. ರಾಜಣ್ಣ ಅವರು ರವಿವಾರ 'ಶಕ್ತಿ' ಯೋಜನೆಗೆ ಚಾಲನೆ ನೀಡಲು ತುಮಕೂರಿನಿಂದ ಕುಣಿಗಲ್ ಮಾರ್ಗವಾಗಿ ಹಾಸನಕ್ಕೆ ತೆರಳುತ್ತಿದ್ದರು. ವಿಷಯ ತಿಳಿದ ಕೆ.ಎನ್. ಆರ್ ಅಭಿಮಾನಿಗಳು ಹಿತೈಷಿಗಳು ಕಾಂಗ್ರೆಸ್ ಕಾರ್ಯಕರ್ತರು ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿಗೌಡ ಸರ್ಕಲ್ ಬಳಿ ಕಾರನ್ನು ತಡೆದು ಪುಪ್ಪ ಮಾಲೆಹಾಕಿ ಅಭಿನಂದಿಸಿದ ಬಳಿಕ ಸಮೀಪದಲ್ಲೇ ಪಟಾಕಿಯನ್ನು ಹಚ್ಚಿ ಸಿಡಿಸಿದ್ದರು.ಈ ವೇಳೆ ರಾಜಣ್ಣ ಧರಿಸಿದ ಕನ್ನಡಕ ತೆಗೆಯುವುದೂ, ಪಟಾಕಿ ಸಿಡಿಯುವುದೂ ಒಂದೇ ವೇಳೆಯಾಗಿತ್ತು. ಈ ವೇಳೆ ಪಟಾಕಿಯ ಕಿಡಿ ನೇರವಾಗಿ ಬಲ ಕಣ್ಣಿಗೆ ಬಂದು ಸಿಡಿದಿದೆ ಎನ್ನಲಾಗಿದೆ.
ತಕ್ಷಣವೇ ಸಚಿವ ರಾಜಣ್ಣ ಅವರು ಸ್ಥಳೀಯ ಎಂ.ಎಂ ಖಾಸಗಿ ಆಸ್ಪತ್ರೆಗೆ ತೆರಳಿ ನೇತ್ರ ತಜ್ಞ ಡಾ.ರವಿಕುಮಾರ್ ಅವರಿಂದ ಚಿಕಿತ್ಸೆ ಪಡೆದು, ಬಳಿಕ ಹಾಸನಕ್ಕೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.