ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎನ್ನುವುದಕ್ಕಿಂತ ಯಾರಿಗೆ ನೀಡುತ್ತಿದ್ದೇವೆ ಎನ್ನುವುದು ಮುಖ್ಯ: ಸಿಎಂ ಸಿದ್ದರಾಮಯ್ಯ
"ಜುಲೈ 1ರಂದು ಗೃಹ ಜ್ಯೋತಿಗೆ ಚಾಲನೆ"
ಬೆಂಗಳೂರು: ‘ಎಲ್ಲ ಜಾತಿ, ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕವಾದ ಶಕ್ತಿ ತುಂಬುವ ಕೆಲಸ ರಾಜ್ಯ ಸರಕಾರದಿಂದ ಆರಂಭವಾಗಿದ್ದು, 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ‘ಗೃಹ ಜ್ಯೋತಿ ಯೋಜನೆ ಜುಲೈ 1ರಿಂದ ಜಾರಿಗೆ ಬರಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.
ರವಿವಾರ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಎಲ್ಲ ಜಾತಿ ಮತ್ತು ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕವಾದ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ನಮಗೆ ಯಾವುದೇ ಜಾತಿ ಧರ್ಮ ಇಲ್ಲ. ನಾವು ಹಿಂದೆ ನುಡಿದಂತೆ ನಡೆದಿದ್ದೇವೆ. ಹಿಂದಿನ ಬಾರಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿ ಕೊಟ್ಟ ಮಾತಿನಂತೆ ನಡೆದಿದ್ದೇವೆ’ ಎಂದು ಹೇಳಿದರು.
‘ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸಾಧ್ಯವಿಲ್ಲ. ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. 59,000ಕೋಟಿ ರೂ.ಗಳ ಅಗತ್ಯವಿದೆ. ಆದರೆ, ಎಷ್ಟು ಹಣ ಖರ್ಚು ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ಯಾರಿಗೆ ನೀಡುತ್ತಿದ್ದೇವೆ ಎನ್ನುವುದು ಮುಖ್ಯ’ ಎಂದು ಅವರು ಹೇಳಿದರು.
ಹಾಗೇ, ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಲೇಬೇಕು. ಹೀಗಾಗಿಯೇ, 10 ಕೆಜಿ ಆಹಾರಧಾನ್ಯಗಳನ್ನು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುದಾರರಿಗೆ ನೀಡುವ ಭರವಸೆ ನೀಡಿದ್ದೇವೆ. ಇದಕ್ಕೆ 10,100 ಕೋಟಿ ರೂ.ಗಳ ಅಗತ್ಯವಿದೆ. ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಲೇಬೇಕು. ಹಸಿವಿನ ಕಷ್ಟ ಊಟವಿಲ್ಲದವರಿಗೆ ತಿಳಿಯುತ್ತದೆ. ಹೊಟ್ಟೆ ತುಂಬಿ ಅಜೀರ್ಣ ಮಾಡಿಕೊಂಡವರಿಗೆ ತಿಳಿದಿರುವುದಿಲ್ಲ ಎಂದು ನುಡಿದರು.