×
Ad

‘ಮನುವಾದಿ’ಗಳಿಗೆ ಗೇಲಿ ಮಾಡುವುದೇ ಕೆಲಸ: ಸಿದ್ದರಾಮಯ್ಯ

Update: 2023-06-11 21:37 IST

ಬೆಂಗಳೂರು: ‘ನಾವು ಜನಪರ ಯೋಜನೆ, ಬಡವರಿಗೆ ಅನುಕೂಲ ಮಾಡಿದರೆ, ಇದನ್ನು ಸಹಿಸದ ಮನುವಾದಿಗಳು ಗೇಲಿ ಮಾಡುವ ಕೆಲಸಕ್ಕೆ ಇಳಿದಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಬಡ, ಮಧ್ಯಮ ವರ್ಗದವರಿಗೆ ಸರಕಾರ ಅನುಕೂಲ ಮಾಡಿದರೆ ಮನುವಾದಿಗಳು, ಬಿಜೆಪಿಯವರು ಸುಳ್ಳುಗಳ ಮೂಲಕ ಗುಲ್ಲೆಬ್ಬಿಸಿ ಗೊಂದಲ ಸೃಷ್ಟಿಸುತ್ತಾರೆ. ಆದರೆ, ನಾವು ನಮ್ಮ ಕೆಲಸಗಳನ್ನು ಮುಂದುವರೆಸುತ್ತೇವೆ. ಟೀಕೆ ಮಾಡುವವರನ್ನು ಹೆಚ್ಚಾಗಿ ಮಾನ್ಯತೆ ನೀಡುವ ಅಗತ್ಯವೂ ಇಲ್ಲ. ಅವರು ಅಲ್ಲಿಯೇ ಇರಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ 20 ದಿನಗಳಲ್ಲಿ ಬಿಜೆಪಿ ಪರಿವಾರ ಸುಳ್ಳಿನ ಮಹಾಪೂರವನ್ನೇ ಹರಿಸಿತು. ನಾವು ವಿಚಲಿತರಾಗಲಿಲ್ಲ. ‘ನಮ್ಮ ಗುರಿ, ನುಡಿದಂತೆ’ ಅದನ್ನು ಮಾಡಿದ್ದೇವೆ. ಮಹಿಳೆಯರನ್ನು ಸಶಕ್ತಗೊಳಿಸುವ ಉದ್ದೇಶದಿಂದ ಈ ಯೋಜನೆಗೆ ‘ಶಕ್ತಿ’ ಎಂದು ಹೆಸರಿಡಲಾಗಿದೆ ಎಂದ ಅವರು, ಬರೀ ಶ್ರೀಮಂತರ ಹಿತ ಕಾಯುವ ಬಿಜೆಪಿ ಯವರಿಗೆ ನಮ್ಮ ಕಾಳಜಿ ಸಹಿಸಲು ಆಗುತ್ತಿಲ್ಲ. ನಮ್ಮ ಗುರಿ ಜನರ ಸಂಕಷ್ಟ ತಗ್ಗಿಸುವುದು. ಪ್ರಮಾಣವಚನ ಸ್ವೀಕರಿಸಿ ಕೇವಲ 20 ದಿನಗಳಲ್ಲಿ ಮೊದಲ ಗ್ಯಾರಂಟಿ ಜಾರಿಯಾಗಿ ನಾಡಿನ ಸಮಸ್ತ ಮಹಿಳೆಯರು ಇದರ ಅನುಕೂಲ ಪಡೆಯಲು ಶುರು ಮಾಡಿದ್ದಾರೆ ಎಂದರು.
ಬಡವರ, ಮಧ್ಯಮ ವರ್ಗದವರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆ ವೇಗ ಪಡೆದುಕೊಳ್ಳುತ್ತದೆ. ಶ್ರೀಮಂತರ ಜೇಬಿಗೆ ಹಣ ಹಾಕಿದರೆ ಆರ್ಥಿಕತೆಗೆ ಅಷ್ಟು ಲಾಭ ಆಗುವುದಿಲ್ಲ. ಆದುದರಿಂದ ನಾವು ಬಡವರು, ಮಧ್ಯಮ ವರ್ಗದವರ ಜೇಬಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಹಣ ಹಾಕುತ್ತೇವೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧ ಪಕ್ಷದವರು ಎಡಬಿಡಂಗಿಗಳು: ‘ರೈತರ ಸಾಲಮನ್ನಾ ಮಾಡದೇ ಬಂಡವಾಳಶಾಹಿಗಳ ಸಾಲಮನ್ನಾ ಮಾಡುವವರು ಸರಕಾರ ಯಾವ ರೀತಿ ಕಾರ್ಯನಿರ್ವಹಿಸುತ್ತದೇ ಎಂಬುದರ ಕುರಿತು ಪರಿಜ್ಞಾನವಿಲ್ಲ. ಹೀಗಾಗಿಯೇ ತರ್ಕರಹಿತವಾಗಿ ಎಡಬಿಡಂಗಿತನದ ರೂಪದಲ್ಲಿ ವಿರೋಧ ಪಕ್ಷಗಳು ಮಾತನಾಡುತ್ತಿವೆ. ಅವುಗಳಿಗೆ ನಾವು ಸೊಪ್ಪು ಹಾಕದೇ ಮತ್ತು ವಿಚಲಿತರಾಗದೇ ಎಲ್ಲ ಜಾತಿಯಲ್ಲಿರುವ, ಎಲ್ಲ ಧರ್ಮದಲ್ಲಿರುವ ಬಡವರಿಗೆ, ಸಾಮಾಜಿಕ, ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸವನ್ನು ಸರಕಾರ ಮಾಡುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

Similar News