×
Ad

ಈಗಾಗಲೇ ನಮ್ಮ ಯೋಜನೆ ನಕಲು ಮಾಡಿದ ಬಿಜೆಪಿ: ಡಿ.ಕೆ.ಶಿವಕುಮಾರ್

"ಬಿಜೆಪಿ ಡಬಲ್ ಇಂಜಿನ್ ಅಲ್ಲ, ಡಬಲ್ ನಿಲುವಿನ ಪಕ್ಷ"

Update: 2023-06-11 22:01 IST

ಬೆಂಗಳೂರು: ನಾವು ಜಾರಿಗೊಳಿಸಲು ಹೊರಟಿರುವ ‘ಗೃಹಲಕ್ಷ್ಮಿ’ ಯೋಜನೆ ಮಾದರಿಯಲ್ಲಿಯೇ ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವೂ ನಕಲು ಮಾಡಿ ಮಹಿಳೆಯರಿಗೆ 1 ಸಾವಿರ ರೂ.ಕೊಡುತ್ತೇವೆ ಎಂದು ಘೋಷಣೆ ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದರು.

ರವಿವಾರ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮಧ್ಯಪ್ರದೇಶದಲ್ಲಿ ಬಿಜೆಪಿಯವರು ನಮ್ಮ ಯೋಜನೆಯನ್ನು ನಕಲು ಮಾಡಿ ಮಹಿಳೆಯರಿಗೆ 1 ಸಾವಿರ ರೂ. ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಇಲ್ಲಿ 2 ಸಾವಿರ ರೂ.ಕೊಟ್ಟರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರೇ ಕೂಗಾಡುತ್ತಿದ್ದಾರೆ. ಇವರದ್ದು, ಡಬಲ್ ಇಂಜಿನ್ ಅಲ್ಲ. ಬದಲಾಗಿ, ಡಬಲ್ ನಿಲುವಿನ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.

ನಾವು ಬಿಜೆಪಿಯನ್ನು ಟೀಕೆ ಮಾಡಲ್ಲ, ಅವಹೇಳನ ಮಾಡಲ್ಲ. ಏಕೆಂದರೆ ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಅಲ್ಲದೆ, ಬಿಜೆಪಿಯವರು ಕಾಂಗ್ರೆಸ್ ನಾಯಕರಿಗೆ ಕಣ್ಣಿಲ್ಲ, ಕಿವಿಯಿಲ್ಲ ಎಂದುಕೊಂಡಿದ್ದಾರೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಜ.15ನೆ ತಾರೀಕಿನಂದು ‘ನಾ ನಾಯಕಿ’ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮೀ ಯೋಜನೆ ಘೋಷಣೆ ಮಾಡಿದ್ದರು. ಇದೀಗ ಇದನ್ನು ನಕಲು ಮಾಡುವ ಕೆಲಸದಲ್ಲಿ ಬಿಜೆಪಿ ತೊಡಗಿದೆ ಎಂದು ಅವರು ಹೇಳಿದರು.

ಈಗ ವಿರೋಧ ಪಕ್ಷದಲ್ಲಿ ಇರುವ ಈ ಬಿಜೆಪಿಯವರಿಗೆ ಸರಕಾರಿ ಸಂಸ್ಥೆಗಳ ಮೇಲೆ ಪ್ರೀತಿಯೇ ಇಲ್ಲ. ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಗೆ ಸರಕಾರಿ ಬಸ್‍ಗಳನ್ನು ಬಳಸಿಕೊಂಡು ಇನ್ನೂ ಹಣ ಪಾವತಿಯೇ ಮಾಡಿಲ್ಲ ಎಂದು ಆಪಾದಿಸಿದ ಅವರು, ಪರಿಶುದ್ಧವಾದ ಆಡಳಿತ ನೀಡಲು ನಾವು ಸನ್ನದ್ದರಾಗಿದ್ದೇವೆ. ವಿರೋಧ ಪಕ್ಷಗಳು ನಾನಾ ರೀತಿಯಲ್ಲಿ ಟೀಕೆ ಮಾಡುತ್ತಿವೆ. ನಮಗೆ ಆ ಟೀಕೆಗಳಿಗೆಲ್ಲ ಉತ್ತರ ಕೊಡುವುದಕ್ಕೆ ಸಮಯವಿಲ್ಲ ಎಂದರು.

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎನ್ನುವ ಧ್ಯೇಯದೊಂದಿಗೆ ಟೀಕೆಗಳಿಗೆ ಯಾವುದೇ ರೀತಿಯ ಉತ್ತರ ನೀಡದೇ ರಾಜ್ಯದ ಜನರಿಗೆ ನಾವು ನೀಡಿದ ಭರವಸೆಗಳನ್ನು ಈಡೇರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಇನ್ನೂ, ಒಂದು ದೇಶ,ರಾಜ್ಯದ ಸ್ಥಿತಿಗತಿ ಹೇಗಿದೆ ಎಂಬುದರ ಅಧ್ಯಯನ ಮಾಡಬೇಕಿದ್ದರೇ ಅಲ್ಲಿನ ಮಹಿಳೆಯರ ಸ್ಥಿತಿಗತಿ ಅರಿತುಕೊಳ್ಳುವುದು ಅವಶ್ಯ ಎಂದು ಶಿವಕುಮಾರ್ ನುಡಿದರು.

Similar News