ಕಡೂರು: ಸಿಡಿಲು ಬಡಿದು ಯುವಕ ಮೃತ್ಯು; ಮಹಿಳೆಗೆ ಗಾಯ
Update: 2023-06-11 22:30 IST
ಕಡೂರು: ಸಂಬಂಧಿಕರೊಂದಿಗೆ ದೇವಾಲಯಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದು, ಮತ್ತೋರ್ವ ಮಹಿಳೆ ಗಾಯಗೊಂಡ ಘಟನೆ ತಾಲೂಕಿನ ಯಗಟಿಪುರದಲ್ಲಿ ನಡೆದಿದೆ.
ತರೀಕೆರೆ ತಾಲೂಕು ಬಾವಿಕೆರೆ ನಿವಾಸಿ ಮುಖೇಶ್ (33) ಎಂಬವರು ಮೃತಪಟ್ಟವರು.
ರವಿವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಬಿರುಗಾಳಿ ಮತ್ತು ಸಿಡಿಲಿನಿಂದ ಕೂಡಿದ ಭಾರೀ ಮಳೆಯಾಗಿದೆ. ಮಗುವೊಂದರ ಮುಡಿ ಕೊಡುವ ಶಾಸ್ತ್ರಕ್ಕಾಗಿ ಬಂಧುಗಳೆಲ್ಲಾ ಯಗಟಿಪುರ ಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿದ್ದಾಗ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿ ಒಬ್ಬರ ಪ್ರಕಾರ ಈ ಕುಟುಂಬದ ಸದಸ್ಯರು ದೇವಾಲಯದ ದಕ್ಷಿಣ ಭಾಗದಲ್ಲಿ ಶಾಸ್ತ್ರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಏಕಾಏಕಿ ಮಳೆ ಬಂದಿದ್ದು, ಅದರ ಹಿಂದೆಯೇ ಮುಕೇಶ್ ಅವರಿಗೆ ಸಿಡಿಲು ಬಡಿದಿದೆ. ಪಕ್ಕದಲ್ಲೇ ಇದ್ದ ಮಂಜುಳಾ ಅವರ ಕೈಗೆ ಗಾಯವಾಗಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.