ನನ್ನನ್ನೇ ದಾರಿ ತಪ್ಪಿಸುತ್ತೀರಾ? ಸಿಎಂಗೆ ಹೇಳಿ ಅಮಾನತು ಮಾಡಿಸಬೇಕೇ?: ಅಧಿಕಾರಿಗಳಿಗೆ ಸಚಿವ ಮಹದೇವಪ್ಪ ತರಾಟೆ
ಮೈಸೂರು,ಜೂ.12: ಪಡಿತರ ಚೀಟಿಗಳ ಮಾಹಿತಿಯನ್ನು ಸರಿಯಾಗಿ ನೀಡದ ಆಹಾರ ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ಡಾ.ಎಚ್.ಸಿ.ಮಹದೇವಪ್ಪ, ನನ್ನನ್ನೇ ದಾರಿ ತಪ್ಪಿಸುತ್ತೀರಾ? ಮುಖ್ಯಮಂತ್ರಿಗಳಿಗೆ ಹೇಳಿ ಅಮಾನತು ಮಾಡಿಸಬೇಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸೋಮವಾರ ನಡೆದ ಪ್ರಗತಿಪರಿಶೀಲಾನ ಸಭೆಯಲ್ಲಿ ಜು.1 ರಂದು ಅನ್ನ ಭಾಗ್ಯ ಯೋಜನೆ ಜಾರಿ ಸಂಬಂಧ ಆಹಾರ ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಅವರಿಂದ ಮಾಹಿತಿ ಕೇಳಿದರು. ಆಗ ಕುಮುದಾ ಅವರು ತಪ್ಪಾದ ಮಾಹಿತಿ ನೀಡಿದರು. ಇದರಿಂದ ಕೋಪಗೊಂಡ ಸಚಿವರು ಅಧಿಕಾರಿ ವಿರುದ್ಧ ಕಿಡಿಕಾರಿದರು.
ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆಳ ಕುರಿತು ಡಿಎಚ್‍ಓ ಡಾ.ಕೆ.ಎಚ್.ಪ್ರಸಾದ್ ಅವರಿಂದ ಮಾಹಿತಿ ಕೇಳಿದರು. ಡಿಎಚ್‍ಓ ಸಮರ್ಪಕ ಮಾಹಿತಿ ನೀಡದ್ದರಿಂದ ಮತ್ತಷ್ಟು ಗರಂ ಆದ ಸಚಿವರು ನಾನು ಐದು ಷರ್ವ ಆರೋಗ್ಯ ಸಚಿವನಾಗಿದ್ದೆ ಗೊತ್ತಾ ಎಂದು ಕೇಳಿದರು.
ಇದೇ ವೇಳೆ ಶಾಸಕ ತನ್ವೀರ್ ಸೇಠ್ ಮಾತನಾಡಿ, ದೊಡ್ಡ ದೊಡ್ಡ ಕಟ್ಟಗಳು ಶ್ರೀಮಂತರಿಗೆ ಸಿಆರ್ ಕೊಡುತ್ತೀರಿ, ಮಧ್ಯಮವರ್ಗದವರು ಸಣ್ಣಪುಟ್ಟವರಿಗೆ ಸಿಆರ್ ಕೊಡಲು ಏಕೆ ಅಲೆಸುತ್ತೀರಿ, ಅವರ ಮನೆ ನಿರ್ಮಾಣಕ್ಕೆ ಪರವಾನಗಿ ಕೊಡುವ ನೀವು ಸಿಆರ್ ಏಕೆ ನೀಡುವುದಿಲ್ಲ ಎಂದು ಪಾಲಿಕೆ ಆಯುಕ್ತ ಡಾ.ಲಕ್ಷ್ಮಿಕಾಂತರೆಡ್ಡಿ ಅವರನ್ನು ತರಾಟೆಗೆ ತೆಗೆದುಕೊಂಡರು.
ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದಾದರೆ ಪಾಲಿಕೆ ಆಡಳಿತ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ ಎಂದೇ ಅರ್ಥ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಸಮಧಾನ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಪಾಲಿಕೆ ಆಯುಕ್ತರು, ಗ್ರೇಟರ್ ಮೈಸೂರು ವಿಷಯವನ್ನು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಅನುಮೋದನೆಯಾದ ನಂತರ ಸರ್ಕಾರಕ್ಕೆ ಕಳುಹಿಸಲಾಗುವುದ ಎಂದು ಹೇಳಿದರು.
ನಗರದಲ್ಲಿ ಯಾರು ಬೇಕಾದರೂ ಜೆಸಿಬಿ ತಂದು ಕೆಲಸ ಮಾಡಬಹುದು ಎನ್ನುವಂತಾಗಿದೆ. ಅಧಿಕಾರಿಗಳು ಕಡಿವಾಣವನ್ನೇ ಹಾಕುತ್ತಿಲ್ಲ. ಯುಜಿಡಿ ಅಥವಾ ಅನಿಲ ಪೈಪ್‍ಲೈನ್‍ಗೆ ಹಾನಿಯಾದರೆ ಯಾರು ಜವಾಬ್ದಾರಿ? ಎಂದು ಶಾಸಕ ತನ್ವೀರ್ ಸೇಠ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.