ಅಧಿಕಾರಿಗಳಿಗೆ ಸಂವಿಧಾನ ಪೀಠಿಕೆ ಬೋಧಿಸಿದ ಸಚಿವ ಎಚ್.ಸಿ.ಮಹದೇವಪ್ಪ
ಮೈಸೂರು,ಜೂ.12: ಪ್ರಗತಿಪರಿಶೀಲನಾ ಸಭೆಗೂ ಮುನ್ನ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸೋಮವಾರ ನಡೆದ ಪ್ರತಿ ಪರಿಶೀಲನಾ ಸಭೆ ನಡೆಸಿದರು. ಸಭೆ ಆರಂಭಕ್ಕೂ ಮುನ್ನ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಜನಪ್ರತಿನಿಧಗಳಿಗೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಂವಿಧಾನದ ಪೀಠಿಕೆಯನ್ನು ಬೋಧಿಸಿ ಮುಂದಿನ ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡ ನಂತರ ಪ್ರತಿ ಸಭಗೂ ಮುನ್ನ ಸಂವಿಧಾನ ಪೀಠಿಕೆ ಪ್ರತಿಜ್ಞಾವಿಧ ಬೋಧಿಸಬೇಕು. ಇದು ರಾಜ್ಯದ ಎಲ್ಲೆಡೆಯೂ ಜಾರಿಗೆ ಬರಬೇಕು. ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಅದರ ಆಶಯಕ್ಕೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಇದಕ್ಕೂ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವು ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಹೆಜ್ಜೆ ಇಟ್ಟಿದೆ. ಅಲ್ಲದೇ, ದೇಶದಾದ್ಯಂತ ಸಂಚಲನ ಉಂಟು ಮಾಡಿದೆ. ಈ ಕಾರ್ಯಕ್ರಮವು ರಾಜಕೀಯ ಅಥವಾ ಮತ ಗಳಿಕೆಯ ಉದ್ದೇಶದಿಂದ ಮಾಡಿರುವುದಲ್ಲ. ಸರ್ಕಾರಿ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಸಿಕ್ಕಿದ್ದಕ್ಕೆ ಮಹಿಳೆಯರು ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹಣ ಉಳಿತಾಯ ಆಗುತ್ತಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ ಎಂದರು.
ಎಷ್ಟೋ ಮಹಿಳೆಯರು ಪ್ರವಾಸಕ್ಕೆ ಹೋಗೇ ಇರುವುದಿಲ್ಲ. ಸುತ್ತಾಡದಿದ್ದರೆ ಹೇಗೆ ಲೋಕಜ್ಞಾನ ವೃದ್ಧಿಯಾಗುತ್ತದೆ?. ಅವರೂ ಆಗಾಗ ಪ್ರವಾಸ ಕೈಗೊಳ್ಳಬೇಕು. ಅದಕ್ಕಾಗಿ ಮುಕ್ತ ಅವಕಾಶ ಮಾಡಿಕೊಟ್ಟಿದ್ದೇವೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಯೋಜನೆಯನ್ನು ವ್ಯಂಗ್ಯ ಮಾಡುತ್ತಿರುವವರು ಮನುವಾದಿಗಳು. ಮಹಿಳಾ ಸಮಾನತೆ, ಸಮಾನ ಅವಕಾಶ ಹಾಗೂ ಸಮಾನ ವೇತನ ನೀಡುವುದನ್ನು ವಿರೋಧಿಸಿದವರು. ಸರ್ಕಾರದ ಕ್ರಮವನ್ನು ರಾಜ್ಯದಾದ್ಯಂತ ಮಹಿಳೆಯರು ಸ್ವಾಗತಿಸುತ್ತಿರುವುದು ಕಣ್ಣಿಗೆ ಕಾಣಿಸುತ್ತಿದ್ದರೂ ವ್ಯಂಗ್ಯ ಮಾಡುವವರಿಗೆ ಏನು ಹೇಳುವುದು ಎಂದು ಕೇಳಿದರು.