×
Ad

ಬಸ್ ಗೆ ನಮಸ್ಕರಿಸಿ ಪ್ರಯಾಣ ಬೆಳೆಸಿದ ಅಜ್ಜಿ...: ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು ಎಂದ ಸಿದ್ದರಾಮಯ್ಯ

Update: 2023-06-12 22:08 IST

ಬೆಂಗಳೂರು, ಜೂ. 12: ‘ನಾವು ಎಷ್ಟು ಅನುದಾನ ಖರ್ಚು ಮಾಡುತ್ತೇವೆ ಎನ್ನುವುದಕ್ಕಿಂತ ಯಾರಿಗಾಗಿ ಆ ಹಣ ವಿನಿಯೋಗಿಸುತ್ತಿದ್ದೇವೆ ಎಂಬುದು ಮುಖ್ಯ. ಈ ಕ್ಷಣ ಇನ್ನೂ ನೂರು ವಿಧದಲ್ಲಿ ಟೀಕೆಗಳು ಎದುರಾದರೂ ಅದ್ಯಾವುದಕ್ಕೂ ಕುಗ್ಗದಂತೆ ನನ್ನನ್ನು ಗುರಿಯೆಡೆಗೆ ಮತ್ತಷ್ಟು ದೃಢವಾಗಿಸಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸೋಮವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ ಯೋಜನೆ’ ಜಾರಿ ಹಿನ್ನೆಲೆಯಲ್ಲಿ ಧಾರವಾಡದ ವೃದ್ಧ ಮಹಿಳೆ ನಿಂಗವ್ವ ಸಿಂಗಾಡಿ ಅವರು ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದ ತನ್ನ ಮೊಮ್ಮಗನ ಮನೆ ಗೃಹ ಪ್ರವೇಶಕ್ಕೆ ಹೊರಟಿದ್ದರು. ಈ ವೇಳೆ ಧಾರವಾಡದಲ್ಲಿ ಸಾರಿಗೆ ಬಸ್ ಏರುವ ವೇಳೆ ಮೆಟ್ಟಿಲಿಗೆ ಶಿರಬಾಗಿ ನಮಸ್ಕಾರಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.

‘ನಾವು ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಘೋಷಿಸಿದಾಗ ಶ್ರಮಪಡದೆ ಸಮಾಜದ ಎಲ್ಲ ವಿಧದ ಸೌಲಭ್ಯಗಳನ್ನು ಕೂತಲ್ಲಿಯೇ ಅನುಭವಿಸುತ್ತಿರುವ ಜನರಿಂದ ತರತರನಾದ ಟೀಕೆಗಳು, ಕುಹಕ, ವ್ಯಂಗ್ಯಗಳು ವ್ಯಕ್ತವಾದವು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಇಂದು ಶಕ್ತಿ ಯೋಜನೆಯನ್ನು ಜಾರಿಗೆ ಕೊಟ್ಟೆವು’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

‘ಶಕ್ತಿ ಯೋಜನೆ ಜಾರಿಗೊಂಡ ನಂತರ ತಾಯಿಯೊಬ್ಬರು ಧಾರವಾಡ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ನಮಸ್ಕರಿಸಿ ಅತ್ಯಂತ ಸಂತೋಷದಿಂದ ಉಚಿತ ಪ್ರಯಾಣ ಬೆಳೆಸಿದರು. ಯೋಜನೆ ಜಾರಿಗೆ ಕೊಟ್ಟ ನನಗೆ ಸಂತೃಪ್ತಿ ನೀಡಿದ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ ಚಿತ್ರವಿದು’ ಎಂದು ಸಿದ್ದರಾಮಯ್ಯ ಟ್ವಿಟರ್ ನಲ್ಲಿ ಬಣ್ಣಿಸಿದ್ದಾರೆ.

Similar News