ಶಕ್ತಿ ಯೋಜನೆ: 2ನೇ ದಿನ 41.34 ಲಕ್ಷ ಮಂದಿ ಮಹಿಳೆಯರ ಪ್ರಯಾಣ
ಬೆಂಗಳೂರು, ಜೂ. 13: ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ರಾಜ್ಯ ಸರಕಾರದ ಮಹತ್ವಕಾಂಕ್ಷೆಯ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದ್ದು, ಎರಡನೆ ದಿನ 41.34ಲಕ್ಷ ಮಂದಿ ಮಹಿಳೆಯರು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸಿದ್ದಾರೆ.
ಸಾರಿಗೆ ಇಲಾಖೆ ಈ ಸಂಬಂಧ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಜೂ.12ರ ಮಧ್ಯರಾತ್ರಿ 12ಗಂಟೆಯ ವರೆಗೆ ಒಟ್ಟು 41,34,726 ಮಂದಿ ಮಹಿಳೆಯರು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸಿದ್ದು, ಶೂನ್ಯ ಟಿಕೆಟ್ ಪ್ರಯಾಣದ ಮೊತ್ತ ಒಟ್ಟು 8,83,53,434 ರೂ.(8.83ಕೋಟಿ ರೂ.)ಗಳು ಎಂದು ತಿಳಿಸಲಾಗಿದೆ.
ಕೆಎಸ್ಸಾರ್ಟಿಸಿ-11.40ಲಕ್ಷ ಮಂದಿ ಒಟ್ಟು 3.57 ಕೋಟಿ ರೂ., ಬಿಎಂಟಿಸಿ-17.57 ಲಕ್ಷ ಮಂದಿ ಒಟ್ಟು 1.75 ಕೋಟಿ ರೂ., ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ-8.31ಲಕ್ಷ ಮಂದಿ ಒಟ್ಟು 2.10 ಕೋಟಿ ರೂ. ಹಾಗೂ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ- 4.04 ಲಕ್ಷ ಮಂದಿ ಮಹಿಳೆಯರು ಪ್ರಯಾಣಿಸಿದ್ದು, ಒಟ್ಟು 1.39 ಕೋಟಿ ರೂ.ಗಳು ಶೂನ್ಯ ಟಿಕೆಟ್ ಮೌಲ್ಯವಾಗಿದೆ ಎಂದು ತಿಳಿಸಿದೆ.
ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ’ ಯೋಜನೆಗೆ ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮನೆಯಿಂದ ಹೊರಗೆ ಹೋಗಬೇಕೆಂದರೆ ಮಹಿಳೆಯರು ದ್ವಿಚಕ್ರ ವಾಹನವನ್ನು ಬಿಟ್ಟು ಕೈಯಲ್ಲಿ ಆಧಾರ್ ಕಾರ್ಡ್ ಹಿಡಿದು ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸುವ ದೃಶ್ಯ ಸಾಮಾನ್ಯವಾಗಿತ್ತು. ಬಸ್‍ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.
ಟಿಕೆಟ್ ಕಡ್ಡಾಯ: ಉಚಿತ ಪ್ರಯಾಣಕ್ಕೆ ಮಹಿಳೆಯರು ‘ಕರ್ನಾಟಕ ರಾಜ್ಯದ ನಿವಾಸಿಗಳು’ ಎಂದು ಸಾಕ್ಷೀಕರಿಸಲು ಯಾವುದಾದರೂ ಒಂದು ದಾಖಲಾತಿಯನ್ನು ತೋರಿಸಬೇಕು. ರಾಜ್ಯದ ವಿಳಾಸವಿರುವ ಭಾವಚಿತ್ರ ಸಹಿತ ಅಧಿಕೃತ ದಾಖಲೆಗಳ ಮೂಲಪ್ರತಿ, ನಕಲು(ಹಾರ್ಡ್ ಮತ್ತು ಸಾಫ್ಟ್ ಕಾಪಿ)ಮಾದರಿಯ ಗುರುತಿನ ದಾಖಲೆಯನ್ನು ಮಾನ್ಯ ಮಾಡಲಾಗುತ್ತದೆ. ಲೆಕ್ಕ ತೋರಿಸಲು ಮಹಿಳೆಯರಿಗೆ ಪ್ರಯಾಣ ಉಚಿತ. ಆದರೆ, ಟಿಕೆಟ್ ಪಡೆಯುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಕೊಡಿ: ‘ಹಾವೇರಿ ಜಿಲ್ಲೆಯ ಹಾನಗಲ್‍ನಲ್ಲಿ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಪ್ರಯಾಣಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ವಾಹನದ ಫುಟ್‍ಬೋರ್ಡ್‍ನಲ್ಲಿ ಪ್ರಯಾಣಿಕರು ನಿಂತು ಪ್ರಯಾಣಿಸಲು ಅವಕಾಶ ನೀಡಬಾರದು. ಚಾಲಕರು ಬಸ್ಸಿನ ಹಿಂದಿನ ಮತ್ತು ಮುಂದಿನ ಬಾಗಿಲು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ವಾಹನ ಚಾಲನೆ ಮಾಡಬೇಕು. ನಿಲ್ದಾಣ ತಲುಪುವ ಮುಂಚೆ ವಾಹನದ ಬಾಗಿಲನ್ನು ತೆರೆಯದೆ, ನಿಲುಗಡೆ ಸ್ಥಳದಲ್ಲೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಬೇಕು’ ಎಂದು ಕೆಎಸ್ಸಾರ್ಟಿಸಿ ಸೂಚಿಸಿದೆ.