ವಿಪಕ್ಷ ನಾಯಕನ ಆಯ್ಕೆ ಯಾವಾಗ?: ಕೊನೆಗೂ ನಿರ್ಧಾರ ಪ್ರಕಟಿಸಿದ ಬೊಮ್ಮಾಯಿ
Update: 2023-06-13 20:10 IST
ಬೆಂಗಳೂರು: ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದು ಮಂಗಳವಾರಕ್ಕೆ (ಜೂ.13) ಒಂದು ತಿಂಗಳು ಪೂರ್ಣವಾಗುತ್ತಿದ್ದು, ಬಿಜೆಪಿಗೆ ಇದುವರೆಗೆ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ.ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.
ಹುಬ್ಬಳ್ಳಿ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ನಾನು ವಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿ ಅಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
''ಅಧಿವೇಶನ ಕರೆದ ಕೂಡಲೆ ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯುತ್ತೆ. ಪ್ರತಿ ಬಾರಿ ನಡೆಯುವ ಸಂಪ್ರದಾಯ ಇದು'' ಎಂದು ಅವರು ಹೇಳಿದರು.
ಪರಿಷತ್ ಚುನಾವಣೆ: ವಿಧಾನ ಪರಿಷತ್ ಚುನಾವಣೆಯ ಮೂರೂ ಸ್ಥಾನಗಳಿಗೆ ನಾವು ಸ್ಪರ್ಧಿಸುತ್ತೇವೆ. ಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಆದರೂ ಪ್ರತಿಪಕ್ಷವಾಗಿ ಸ್ಪರ್ಧಿಸುತ್ತೇವೆ ಎಂದು ಬೊಮ್ಮಾಯಿ ಸ್ಪಷ್ಟಣೆ ನೀಡಿದರು.