×
Ad

ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿಯ ನಾಯಕರ ಹೊಂದಾಣಿಕೆ: ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ

Update: 2023-06-13 20:47 IST

ಮೈಸೂರು,ಜೂ.13: ರಾಜ್ಯದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿದ್ದು, ಯಾರ ಮೇಲೆ ಯಾರು ಆರೋಪ ಮಾಡದಂತೆ ಒಂದು ಗೌಪ್ಯ ಒಡಂಬಡಿಕೆ ಮಾಡಿಕೊಂಡಂತೆ ವರ್ತಿಸುತ್ತಿದ್ದಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ''ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಬಿಜೆಪಿಯ ಅತಿರಥ ಮಹಾರಥರೇ ಶಾಮೀಲಾಗಿರಬಹುದು'' ಎಂದು ತಮ್ಮ ಪಕ್ಷದ ಹಿರಿಯ ನಾಯಕರ ವಿರುದ್ಧವೇ ಕಿಡಿಕಾರಿದರು.

''ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ಹೊಂದಾಣಿಕೆ ಮಾಡಿಕೊಂಡಿರುವಂತೆ ಕಾಣುತ್ತದೆ. ಬಿಜೆಪಿಯವರು ಅಧಿಕಾರಕ್ಕೆ ಬಂದ ಕೂಡಲೇ ಅರ್ಕಾವತಿ ಹಗರಣ, ಡಿ.ನೋಟಿಫಿಕೇಶನ್, ಕೆಂಪಣ್ಣ ಆಯೋಗದ ವರದಿ ಮುಂತಾದ ಪ್ರಕರಣಗಳನ್ನು ತೋರಿಸಿ ಕಾಂಗ್ರೆಸ್ ನಾಯಕರನ್ನು  ಹೆದರಿಸುತ್ತಾರೆ. ಕಾಂಗ್ರೆಸ್ಸಿನವರು ಅಧಿಕಾರಕ್ಕೆ  ಬಂದ ಮೇಲೆ ಬಿಜೆಪಿ ಸರ್ಕಾರದಲ್ಲಿ ಕೇಳಿ ಬಂದಿದ್ದ ಆರೋಪಗಳ ಬಗ್ಗೆ ತನಿಖೆ ನಡೆಸಿ ಕ್ರಮ  ಕೈಗೊಳ್ಳುವ ಬೆದರಿಕೆಯನ್ನು ಹಾಕುತ್ತಾರೆ. ಯಾರೂ ಯಾರ ವಿರುದ್ಧವೂ  ತನಿಖೆ ಮಾಡಲ್ಲ, ಅದನ್ನು ನೋಡಿದರೆ ಎರಡೂ ಪಕ್ಷದ ಹಿರಿಯ ನಾಯಕರು ಪರಸ್ಪರ ಹೊಂದಾಣಿಕೆ ರಾಜಕೀಯವನ್ನು ಮಾಡುತ್ತಿದ್ದಾರೆಂಬ ಅನುಮಾನಗಳು ಮೂಡುತ್ತಿವೆ'' ಎಂದು ಅಸಮಧಾನ ವ್ಯಕ್ತಪಡಿಸಿದರು.

''ನೀವು ಅಧಿಕಾರಕ್ಕೆ ಬಂದ ತಕ್ಷಣ ನಮ್ಮವರನ್ನು ಹೆದರಿಸುತ್ತೀರಿ. ನಮ್ಮವರು ಅಧಿಕಾರಕ್ಕೆ ಬಂದ ತಕ್ಷಣ ನಿಮ್ಮವರನ್ನು ಹೆದರಿಸುತ್ತಾರೆ. ಇದೆಲ್ಲವೂ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಇರಬಹುದೇ'' ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.

''ಇಂಥ ಹೊಂದಾಣಿಕೆ ರಾಜಕೀಯವು ನಿನಗೆ ತುರಿಕೆಯಾದಾಗ ನಾನು ನಿನ್ನ ಬೆನ್ನು ಕರೆಯುತ್ತೇನೆ. ನನಗೆ ತುರಿಕೆಯಾದಾಗ ನೀನು ನನ್ನ ಬೆನ್ನು ಕೆರಿ ಎನ್ನುವಂಥ ಹೊಂದಾಣಿಕೆಯ ರಾಜಕೀಯ ಈಗ ಜಾಲ್ತಿಯಲ್ಲಿದೆಯೇನೋ ಎಂದೆನಿಸುತ್ತಿದೆ. ನಮ್ಮ ಪಕ್ಷದ ಕಾರ್ಯರ್ಕರು ಎಂದಿಗೂ ಹೀಗೆ ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್ ಮಾಡಲ್ಲ. ಕೇವಲ ನಿಮ್ಮಂಥ ಹಿರಿಯ ನಾಯಕರೇ ಇಂಥ ರಾಜಕೀಯ ಮಾಡೋದು'' ಎಂದು ಟೀಕಿಸಿದರು.

''ನೀವು ನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡುತ್ತಿದ್ದೀರಿ. ಅದನ್ನೀಗ ಸಾಬೀತುಪಡಿಸಿ. 40 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದವರನ್ನು ಹಿಡಿದು ನೀವು ಶಿಕ್ಷೆ ಕೊಡಿಸಿದ್ದೇ ಆದಲ್ಲಿ ನಮ್ಮ ಪಕ್ಷವನ್ನು ಸ್ವಚ್ಛಗೊಳಿಸಿದ್ದಕ್ಕಾಗಿ ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ನಿಮ್ಮ ಪಾದ ಪೂಜೆ ಮಾಡುತ್ತೇನೆ. ಈ ಮಾತನ್ನು ಹಿಂದೆಯೂ ಹೇಳಿದ್ದೆ ಈಗಲೂ ಹೇಳುತ್ತಿದ್ದೇನೆ'' ಎಂದು ಹೇಳಿದರು.

Similar News