×
Ad

ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲದ ಮೊತ್ತ ಹೆಚ್ಚಳ: ಸಚಿವ ಕೆ.ಎನ್.ರಾಜಣ್ಣ

Update: 2023-06-13 22:52 IST

ಬೆಂಗಳೂರು, ಜೂ.13: ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲದ ಪ್ರಮಾಣವನ್ನು 3 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗೇರಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೂನ್ಯ ಬಡ್ಡಿ ದರದಲ್ಲಿ ನೀಡುವ ಕೃಷಿ ಸಾಲದ ಪ್ರಮಾಣವನ್ನು ಹೆಚ್ಚಿಸುವ ಕುರಿತು ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದನ್ನು ಜಾರಿ ಮಾಡುವ ಬದ್ಧತೆ ನಮಗೆ ಇದೆ ಎಂದು ನುಡಿದರು.

ರೈತರಿಗೆ ಮಧ್ಯಮಾವಧಿ ಸಾಲದ ರೂಪದಲ್ಲಿ ಶೇ.3ರ ಬಡ್ಡಿ ದರದೊಂದಿಗೆ 10 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಈ ಪ್ರಮಾಣವನ್ನು 10ರಿಂದ 20 ಲಕ್ಷ ರೂಪಾಯಿಗಳಿಗೆ ಹೆಚ್ಚಳ ಮಾಡಲಾಗುವುದು ಎಂದ ಅವರು, ಸಹಕಾರ ಇಲಾಖೆಯಲ್ಲಿ ಕೆಲಸ ಮಾಡಲು ನನ್ನನ್ನು ನೇಮಕ ಮಾಡಲಾಗಿದೆ. ಹೀಗಾಗಿ ನನ್ನ ಮುಂದಿರುವ ಕೆಲಸ ಮಾಡುತ್ತೇನೆ. ಇಲ್ಲಿ ನಡೆದಿರುವ ಅಕ್ರಮ ಆರೋಪಗಳ ತನಿಖೆಗಾಗಿ ಹೆಚ್ಚಿನ ಸಮಯ ವ್ಯಯ ಮಾಡುವುದಿಲ್ಲ. ಒಂದು ವೇಳೆ ಸಹಕಾರ ಇಲಾಖೆಯಲ್ಲಿ ಅವ್ಯವಹಾರ ನಡೆದಿದ್ದರೆ ಸಹಜವಾಗಿಯೇ ಅದು ಇಲಾಖೆಯ ತನಿಖೆಗೆ ಒಳಪಡುತ್ತದೆ ಎಂದರು.

ಜೂ.16 ರಂದು ಡಿಸಿಸಿ ಬ್ಯಾಂಕ್‍ಗಳ ಸಭೆ ಕರೆದಿದ್ದು, ಆಯಾ ಜಿಲ್ಲೆಯ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಗುವುದು. ಸಹಕಾರ ಇಲಾಖೆಯನ್ನು ಜನರ ಇಲಾಖೆಯನ್ನಾಗಿ ಮಾಡಬೇಕೆಂಬುದು ನಮ್ಮ ಉದ್ದೇಶ. ಇನ್ನೂ, ವಿಧಾನಸಭಾ ಚುನಾವಣೆಗೂ ಮುನ್ನ ತಾ.ಪಂ., ಜಿ.ಪಂ. ಚುನಾವಣೆ ನಡೆಯಲಿದೆ. ಯುವಕರಿಗೆ ಅವಕಾಶ ಮಾಡಿಕೊಡಬೇಕು. ಆ ನಿಟ್ಟಿನಲ್ಲಿ 7 ಕ್ಷೇತ್ರಗಳ ಪಕ್ಷದ ಕಾರ್ಯಕರ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದರು.

Similar News