×
Ad

ಹೊಸಬರಿಗೆ ಟಿಕೆಟ್‌ ನೀಡಲು ಹೇಳಿದವರನ್ನು ನೇಣಿಗೆ ಹಾಕಿ: ಸ್ವಪಕ್ಷದ ವಿರುದ್ಧವೇ BJP ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ

ಹೊಣೆ ಯಾರು, ನೇಣುಗಂಬ ಯಾರಿಗೆ? ಎಂದು ಕಾಳೆಲೆದ ಕಾಂಗ್ರೆಸ್

Update: 2023-06-14 11:56 IST

ವಿಜಯಪುರ: 'ವಿದಾನಸಭೆ ಚುನಾವಣೆಗೆ ಹೊಸಬರಿಗೆ ಟಿಕೆಟ್‌ ಕೊಡಿ ಎಂದು ಬಿಜೆಪಿ ಹೈಕಮಾಂಡ್‌ಗೆ ಯಾರು ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರನ್ನು ನೇಣಿಗೆ ಬೇಕಾದರೂ ಹಾಕಿ, ಕಾಲನ್ನಾದರೂ ಕಡಿಯಿರಿ ಎಂದು ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ 70 ಕ್ಕೂ ಹೆಚ್ಚು ಜನ ಹೊಸಬರಿಗೆ ಟಿಕೆಟ್ ನೀಡಲಾಗಿತ್ತು, ಅದರಲ್ಲಿ ಗೆದ್ದವರು ಬೆರಳಣಿಕೆಯಷ್ಟು ಜನರಿಗೆ ಮಾತ್ರ. ಹಿರಿಯರಿಗೆ ಟಿಕೇಟ್ ಕೊಟ್ಟಿದ್ದರೆ ಎಲ್ಲರೂ ಗೆಲ್ಲುತ್ತಿದ್ದರು, ಆರಾಮಾಗಿ 130 ಕ್ಕೂ ಹೆಚ್ಚು ಸೀಟ್‌ಗಳಲ್ಲಿ ಬಿಜೆಪಿ ಗೆದ್ದು ಬಹುಮತ ಸಾಧಿಸಿತ್ತು, ಯಾರು ಹೊಸಬರಿಗೆ ಟಿಕೆಟ್ ಕೊಡಿ ಎಂದು ಐಡಿಯಾ ಕೊಟ್ಟಿದ್ದಾರೋ ಗೊತ್ತಿಲ್ಲ, ಅವರಿಗೆ ನೇಣಿಗೆ ಬೇಕಾದರೂ ಹಾಕಿ, ಕಾಲನ್ನಾದರೂ ಕಡಿಯಿರಿ'' ಎಂದು ಅಸಮಾಧಾನ ಹೊರಹಾಕಿದರು.

ಉತ್ತರ ಕರ್ನಾಟಕದ ಪ್ರಬಾವಿ ನಾಯಕ ಜಗದೀಶ ಶೆಟ್ಟರ್ ಅವರು ಪಕ್ಷ ಬಿಟ್ಟು ಹೋಗಿರುವುದು, ಗ್ಯಾರಂಟಿ ಅಬ್ಬರ ಪರಿಣಾಮವಾಗಿ ಬಿಜೆಪಿಗೆ ಹಿನ್ನೆಡೆಯಾಗಿದೆ ಎಂದರು.

ಹೊಣೆ ಯಾರು, ನೇಣುಗಂಬ ಯಾರಿಗೆ?: ಕಾಂಗ್ರೆಸ್ ಪ್ರಶ್ನೆ

''ಹೊಸಬರಿಗೆ ಟಿಕೆಟ್ ನೀಡಿದವರನ್ನು ನೇಣಿಗೆ ಹಾಕಿ ಅಂದಿದ್ದಾರೆ ಬಿಜೆಪಿ ಸಂಸದ. ಈಗ ಯಾರನ್ನು ನೇಣಿಗೆ ಹಾಕುವಿರಿ?'' ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನೆ ಮಾಡಿದೆ. 

'ಅಮಿತ್ ಷಾರವರನ್ನೋ? ಬಿ ಎಲ್ ಸಂತೋಷರನ್ನೊ? ಪ್ರಹ್ಲಾದ್ ಜೋಶಿಯವರನ್ನೋ ? ಮೋದಿಯವರನ್ನೋ? ಬೊಮ್ಮಾಯಿಯವರನ್ನೋ? ಹೊಣೆ ಯಾರು, ನೇಣುಗಂಬ ಯಾರಿಗೆ? ಸೋಲಿನ ನಾಯಕತ್ವ ವಹಿಸಿಕೊಳ್ಳುವವರು ಯಾರು? ಬಿಜೆಪಿಯಿಂದ ಉತ್ತರ ನಿರೀಕ್ಷಿಸಬಹುದೇ?' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ. 

Similar News