ಅಕ್ರಮ ಗಣಿಗಾರಿಕೆ: ಸಚಿವ ನಾಗೇಂದ್ರ ಸೇರಿ 10 ಜನರಿಗೆ ಸಮನ್ಸ್
Update: 2023-06-14 19:03 IST
ಬೆಂಗಳೂರು, ಜೂ.14: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯುವಜನ ಸಬಲೀಕರಣ, ಕ್ರೀಡೆ ಮತ್ತು ಪರಿಶಿಷ್ಟರ ಕಲ್ಯಾಣ ಸಚಿವ ಬಿ.ನಾಗೇಂದ್ರ, ಶಾಸಕ ಜನಾರ್ದನರೆಡ್ಡಿ ಸೇರಿದಂತೆ 10 ಮಂದಿಗೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ವಿಚಾರಣೆ ನಡೆಸಿದ ನ್ಯಾಯಾಲಯ ಎಲ್ಲರೂ ಖುದ್ದು ಹಾಜರಾಗುವಂತೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಜು.26ಕ್ಕೆ ಮುಂದೂಡಿದೆ. 2015ರಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡವು ರಚನೆಯಾಗಿ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ಕೈಗೊಂಡಿದೆ. ಕೋಟ್ಯಂತರ ರೂ.ಅಕ್ರಮ ಗಣಿಗಾರಿಕೆ ನಡೆದಿರುವುದರಿಂದ ಎಸ್‍ಐಟಿ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿದೆ.
ನ್ಯಾಯಾಲಯದಲ್ಲಿ ಪ್ರಕರಣ ಕುರಿತು ಆರೋಪಪಟ್ಟಿ ಸಹ ಸಲ್ಲಿಕೆ ಮಾಡಲಾಗಿದೆ. ಈ ಸಂಬಂಧ ನ್ಯಾಯಾಲಯವು ವಿಚಾರಣೆ ನಡೆಸುತ್ತಿದ್ದು, ಸಚಿವ ನಾಗೇಂದ್ರ, ಶಾಸಕ ಜನಾರ್ದನರೆಡ್ಡಿ ಸೇರಿದಂತೆ 10 ಮಂದಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.