×
Ad

ಲಂಚ ಸ್ವೀಕಾರ ಆರೋಪ: ನೌಕರರ ವಿರುದ್ಧದ ವಿಚಾರಣೆ 2 ತಿಂಗಳಲ್ಲಿ ಪೂರ್ಣಗೊಳಿಸಲು ಹೈಕೋರ್ಟ್ ಸೂಚನೆ

Update: 2023-06-14 21:40 IST

ಬೆಂಗಳೂರು, ಜೂ.14: ಲಂಚ ಸ್ವೀಕರಿಸಿದ ಆರೋಪದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ(ಕೆಪಿಟಿಸಿಎಲ್) ನಿವೃತ್ತ ನೌಕರರೊಬ್ಬರ ವಿರುದ್ಧ 2007ರಿಂದ ಬಾಕಿ ಇರುವ ಇಲಾಖಾ ವಿಚಾರಣೆಯನ್ನು 2 ತಿಂಗಳೊಳಗೆ ಪೂರ್ಣಗೊಳಿಸುವಂತೆ ಉಪಲೋಕಾಯುಕ್ತರಿಗೆ ಹೈಕೋರ್ಟ್ ಸೂಚನೆ ನೀಡಿದೆ. 

ಬಿ.ಎಲ್.ಬೋರೇಗೌಡ ಎಂಬುವರಿಗೆ ಪೂರ್ಣ ಪ್ರಮಾಣದಲ್ಲಿ ಪಿಂಚಣಿ ಮತ್ತಿತರ ನಿವೃತ್ತಿ ಸೌಲಭ್ಯ ಕಲ್ಪಿಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್  ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಬೋರೇಗೌಡ ಅವರು 2012ರಲ್ಲೇ ಸೇವೆಯಿಂದ ನಿವೃತ್ತಿ ಹೊಂದಿದ್ದು, ಅವರ ವಿರುದ್ಧದ ಇಲಾಖಾ ವಿಚಾರಣೆ ಇನ್ನೂ ಬಾಕಿ ಇದೆ. ವಿಚಾರಣೆಯನ್ನು ಸಾಧ್ಯವಾದಷ್ಟೂ 2 ತಿಂಗಳ ಒಳಗೆ ಪೂರ್ಣಗೊಳಿಸಲು ಉಪಲೋಕಾಯುಕ್ತರು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಾರೆ ಎಂದು ನ್ಯಾಯಾಲಯ ನಿರೀಕ್ಷಿಸುತ್ತಿದೆ.

ವಿಚಾರಣೆ ಪೂರ್ಣಗೊಂಡ ನಂತರದ 2 ತಿಂಗಳ ಒಳಗೆ ವಿಚಾರಣೆಯ ಫಲಿತಾಂಶ ಆಧರಸಿ ಬೋರೇಗೌಡ ಅವರ ಗ್ರ್ಯಾಚುಟಿ, ಉಳಿಕೆ ಪಿಂಚಣಿ ಮೊತ್ತ ಪಾವತಿಸುವ ಬಗ್ಗೆ ಕೆಪಿಟಿಸಿಎಲ್ ಸೂಕ್ತ ಆದೇಶ ಹೊರಡಿಸಬೇಕು ಎಂದು ಸೂಚನೆ ನೀಡಿದ ನ್ಯಾಯಪೀಠ ಅರ್ಜಿಯನ್ನು ಇತ್ಯರ್ಥ ಪಡಿಸಿದೆ.

Similar News