ಶಿವಮೊಗ್ಗ ಮೆಸ್ಕಾಂ ಕಚೇರಿಗೆ ಮುತ್ತಿಗೆಗೆ ಯತ್ನ; ಸಂಸದ ಬಿ.ವೈ.ರಾಘವೇಂದ್ರ ಸೇರಿ ಹಲವರು ಪೊಲೀಸ್ ವಶಕ್ಕೆ
Update: 2023-06-15 13:50 IST
ಶಿವಮೊಗ್ಗ: ವಿದ್ಯುತ್ ದರ ಹೆಚ್ಚಳ ಖಂಡಿಸಿ ಶಿವಮೊಗ್ಗ ಮೆಸ್ಕಾಂ ಕಚೇರಿ ಮುಂಭಾಗ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಗುರುವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ವೇಳೆ ಮಾತನಾಡಿದ ಬಿ.ವೈ.ರಾಘವೇಂದ್ರ ಕಾಂಗ್ರೆಸ್ ನವರು ಜನರಿಗೆ ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಉಚಿತ ವಿದ್ಯುತ್ ಎಂದು ಘೋಷಣೆ ಮಾಡಿ ಈಗ ವಿದ್ಯುತ್ ದರ ಹೆಚ್ಚಿಸಿದ್ದಾರೆ. ಸರ್ಕಾರದ ತಕ್ಷಣ ವಿದ್ಯುತ್ ದರ ಹೆಚ್ಚಳ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಬಳಿಕ ಮೆಸ್ಕಾಂ ಕಚೇರಗೆ ಮುತ್ತಿಗೆ ಹಾಕಲು ಮುಂದಾದಾಗ ಬ್ಯಾರಿಗೇಡ್ ಹಾಕಿ ಒಳಗೆ ಹೋಗದಂತೆ ಪೊಲೀಸರು ತಡೆದಿದ್ದಾರೆ. ಒಳಗೆ ಬಿಡುವಂತೆ ಪಟ್ಟು ಹಿಡಿದಿದ್ದ ಬಿಜೆಪಿ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದು,ಈ ವೇಳೆ ಸಂಸದ ರಾಘವೇಂದ್ರ, ಮಾಜಿ ಶಾಸಕ ಆಶೋಕ್ ನಾಯ್ಕ್ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.