×
Ad

ಶಕ್ತಿ ಯೋಜನೆ | ಬಸ್‍ಗಳ ಸಂಖ್ಯೆ ಹೆಚ್ಚಿಸಿ, ಖಾಲಿ ಹುದ್ದೆ ಭರ್ತಿ ಮಾಡಿ: KSRTC ವರ್ಕರ್ಸ್ ಫೆಡರೇಷನ್ ಆಗ್ರಹ

Update: 2023-06-15 19:07 IST

ಬೆಂಗಳೂರು, ಜೂ. 15: ಸರಕಾರದ ‘ಶಕ್ತಿ ಯೋಜನೆ’ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಸಾರಿಗೆ ಬಸ್‍ಗಳಲ್ಲಿ ಪ್ರಯಾಣಿಸುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಿಗಮಗಳ ಬಸ್‍ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಜತೆಗೆ ಸಾರಿಗೆ ನಿಗಮಗಳಲ್ಲಿ ಖಾಲಿ ಇರುವ 16,969 ಹುದ್ದೆಗಳನ್ನು ಭರ್ತಿ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಮನವಿ ಮಾಡಿದೆ.

ಗುರುವಾರ ಈ ಸಂಬಂಧ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ವಿಜಯಭಾಸ್ಕರ್ ಡಿ.ಎ., ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ‘ಕೆಲವು ಜಿಲ್ಲೆಗಳಲ್ಲಿ ಖಾಸಗಿ ಬಸ್‍ಗಳು ಸಾಕಷ್ಟು ಸಂಖ್ಯೆಯಲ್ಲಿರುವುದರಿಂದ ಮಹಿಳೆಯರು ಆ ವಾಹನಗಳನ್ನು ಬಿಟ್ಟು ನಮ್ಮ ಸಂಸ್ಥೆಯ ವಾಹನಗಳಲ್ಲಿ ಸಂಚರಿಸುತ್ತಿದ್ದಾರೆ. ಆದಕಾರಣ ಖಾಸಗಿ ಬಸ್‍ಗಳಲ್ಲಿ ಸಂಚರಿಸುತ್ತಿರುವ ಮಹಿಳೆಯರ ಸಂಖ್ಯೆ ಶೂನ್ಯವಾಗಿ ಅಲ್ಲಿ ಕೆಲಸ ಮಾಡುವ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಈ ವಾಹನಗಳಿಗೆ ಬಂಡವಾಳ ಹೂಡಿರುವ ಮಾಲಕರೂ ಸಂಕಷ್ಟದಲ್ಲಿದ್ದಾರೆ ಎಂದು ಗಮನ ಸೆಳೆದಿದ್ದಾರೆ. 

‘ಶಕ್ತಿ ಯೋಜನೆಯಿಂದ ಉಂಟಾಗಿರುವ ಬಸ್‍ಗಳ ಹೆಚ್ಚಿನ ಬೇಡಿಕೆ ಪೂರೈಸಲು ನಿಗಮಗಳು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಾಹನಗಳ ಕೊರತೆ ಇರುವುದರಿಂದ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಇಕ್ಕಟ್ಟಿನ ಸ್ಥಿತಿಯನ್ನು ಎದುರಿಸಬೇಕಾಗಿದೆ. ಹೀಗಾಗಿ ಈಗಾಗಲೇ ಶ್ರೀನಿವಾಸಮೂರ್ತಿ ಅವರ ಏಕಸದಸ್ಯ ಸಮಿತಿಯು ತನ್ನ ವರದಿ ಮತ್ತು ಶಿಫಾರಸುಗಳಲ್ಲಿ ಕೆಎಸ್ಸಾರ್ಟಿಸಿ ಒಂದೇ ಒಂದು ಬಸ್ ಹೋಗದಿರುವಂತಹ 2500ಕ್ಕೂ ಹೆಚ್ಚು ಹಳ್ಳಿಗಳನ್ನು ಗುರುತಿಸಿದ್ದಾರೆ. ಈ ಹಳ್ಳಿಗಳಿಗೂ ನಿಗಮ ಬಸ್ ವ್ಯವಸ್ಥೆ ಮಾಡಬೇಕೆಂದು ಶಿಫಾರಸು ಮಾಡಿದ್ದು, ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕೆಂದು ಆಗ್ರಹಿಸಿದ್ದಾರೆ.

Similar News