ಕೊಡಗು: ರಸ್ತೆ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿ ಮೃತ್ಯು
Update: 2023-06-16 11:42 IST
ಕೊಡಗು: ಸ್ಕೂಟರ್-ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ಕುಶಾಲನಗರದಲ್ಲಿ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.
ಮೃತರನ್ನು ಕುಶಾಲನಗರದ ಇಂದಿರಾ ಬಡಾವಣೆ ನಿವಾಸಿ ಪೂಣಚ್ಚ ಎಂಬವರ ಪುತ್ರಿ ಭಾವನಾ (21) ಎಂದು ಗುರುತಿಸಲಾಗಿದೆ.
ಭಾವನ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಕುಶಾಲನಗರಕ್ಕೆ ಬಂದಿದ್ದ ಈಕೆ ಸ್ನೇಹಿತೆ ನಿಸರ್ಗಳೊಂದಿಗೆ ಚಿತ್ರಮಂದಿರದ ಕಡೆಗೆ ಹೋಗುತ್ತಿದ್ದಳು. ಈ ಸಂದರ್ಭ ಎದುರಿನಿಂದ ಬಂದ ಬುಲೆಟ್ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಭಾವನಾರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರೆನ್ನಲಾಗಿದೆ. ಭಾವನಾ ಜೊತೆ ಪ್ರಯಾಣಿಸುತ್ತಿದ್ದ ಯುವತಿಗೂ ಗಂಭೀರ ಗಾಯಗಳಾಗಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.