ಹುಬ್ಬಳ್ಳಿ: ನಿರ್ಮಾಣ ಹಂತದ ಶಾಲಾ ಕಟ್ಟಡದ ಗೋಡೆ ಕುಸಿದು ವಿದ್ಯಾರ್ಥಿ ಸ್ಥಳದ್ಲಲೇ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ
Update: 2023-06-16 14:13 IST
ಹುಬ್ಬಳ್ಳಿ: ನಿರ್ಮಾಣ ಹಂತದ ಶಾಲಾ ಕಟ್ಟಡದ ಗೋಡೆ ಕುಸಿದು ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ್ದು, ಮತ್ತೋರ್ವ ವಿಧ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಬೆಳಗ್ಗೆ ವರದಿಯಾಗಿದೆ.
ಮೂರನೇ ತರಗತಿಯ ವಿಶೃತ್ ಬೆಳಗಲಿ (9) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಪ್ರಜ್ವಲ್ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯವಾಗಿದೆ. ಬೆಳಗ್ಗೆ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳು ಶಾಲಾ ಕೊಠಡಿಯ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಕೆಳಭಾಗ ಆಟವಾಡುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಗಾಯಾಳು ವಿದ್ಯಾರ್ಥಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.