×
Ad

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಬಿ ಎಲ್ ಸಂತೋಷ್ ಕೊಡುಗೆಯೂ ಅಪಾರ: ಎಂ.ಬಿ ಪಾಟೀಲ್

Update: 2023-06-17 13:02 IST

ಬೆಂಗಳೂರು: ಬಿ ಎಲ್ ಸಂತೋಷ್ ರವರೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯವಾಡಿದ್ದಾರೆ.

ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಸಚಿವ ಎಂ ಬಿ ಪಾಟಿಲ್  ಅವರು, ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ. ಇದೀಗ ಉಳಿದಿರುವ, ಏಕೈಕ ಹಿರಿಯ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಮುಗಿಸಲು ಅವರ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಎತ್ತಿ ಕಟ್ಟಿ, ಜೊತೆಗೆ ನಿಮ್ಮ ಪಟ್ಟಾ ಶಿಷ್ಯ ಪ್ರತಾಪ್ ಸಿಂಹ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುರಿನೆಟ್ಟಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕರ್ನಾಟಕದ ಇತ್ತೀಚಿನ ರಾಜಕಾರಣವನ್ನು ಒಂದೇ ವಾಕ್ಯದಲ್ಲಿ ಹೇಳುವುದಾದರೆ, ವಿಶ್ವೇಶ್ವರ ಭಟ್ ರವರು ಹೇಳಿರುವ "ಅತಿಯಾದ ‘ಸಂತೋಷ’ವೇ ದುಃಖಕ್ಕೆ ಕಾರಣ". ಲಿಂಗಾಯತರ ನಂತರ ನಿಮ್ಮ ಗುರಿ ಒಕ್ಕಲಿಗರಾ, ದಲಿತರಾ? ಎಂದು ಪ್ರಶ್ನಿಸಿದ್ದಾರೆ.

Similar News