×
Ad

ಚುನಾವಣಾ ಖರ್ಚುವೆಚ್ಚಗಳಿಗೆ ಸಂಬಂಧಿಸಿದಂತೆ ಅನರ್ಹತೆಯ ಭೀತಿ ಎದುರಿಸುತ್ತಿರುವ ರಾಜ್ಯದ ಇಬ್ಬರು ಬಿಜೆಪಿ ಶಾಸಕರು

Update: 2023-06-17 15:58 IST

ಬೆಂಗಳೂರು: ಅಂಕೋಲಾದಲ್ಲಿ ನಡೆದ ಚುನಾವಣಾ ಪ್ರಚಾರ ರ್ಯಾಲಿಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ವೇದಿಕೆ ಹಂಚಿಕೊಂಡಿರುವುದು  ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಬಿಜೆಪಿ ಶಾಸಕರಿಗೆ ದುಬಾರಿಯಾಗಿ ಪರಿಣಮಿಸಬಹುದು. ಸಂಬಂಧಿತ ಚುನಾವಣಾ ಖರ್ಚುವೆಚ್ಚ ವಿವರಗಳನ್ನು ನಿಗದಿತ ಸಮಯದೊಳಗೆ ಸಲ್ಲಿಸಲು ವಿಫಲರಾಗಿದ್ದೇ ಆದಲ್ಲಿ ಶಾಸಕರಾದ ಶಿವರಾಮ್‌ ಹೆಬ್ಬಾರ್‌ ಮತ್ತು ದಿನಕರ್‌ ಶೆಟ್ಟಿ ಆರು ವರ್ಷಗಳ ಅನರ್ಹತೆಗೂ ಗುರಿಯಾಗಬಹುದಾಗಿದೆ ಎಂದು deccanherald.com ವರದಿ ಮಾಡಿದೆ.

ಮೇ 3ರಂದು ಅಂಕೋಲಾದಲ್ಲಿ ನಡೆದ ರ್ಯಾಲಿಯಲ್ಲಿ ಪ್ರಧಾನಿ ಜೊತೆ ವೇದಿಕೆ ಹಂಚಿಕೊಂಡಿದ್ದ ಆರು ಮಂದಿ ಬಿಜೆಪಿ ಅಭ್ಯರ್ಥಿಗಳಲ್ಲಿ ಹೆಬ್ಬಾರ್‌ ಮತ್ತು ಶೆಟ್ಟಿ ಸೇರಿದ್ದರು. ಈ ವೇದಿಕೆ ಕಾರ್ಯಕ್ರಮದ ಒಟ್ಟು ವೆಚ್ಚ ರೂ 1.10 ಕೋಟಿ ಎಂದು ಜಿಲ್ಲಾ ಖರ್ಚುವೆಚ್ಚ ಸಮಿತಿ ಅಂದಾಜಿಸಿದೆ. ಅಭ್ಯರ್ಥಿಗಳು ವೇದಿಕೆಯಲ್ಲಿದ್ದುದರಿಂದ ಖರ್ಚನ್ನು ಅವರೇ ಭರಿಸಿದ್ದಾರೆಂದು ಲೆಕ್ಕ ಹಾಕುವುದರಿಂದ ಆರು ಅಭ್ಯರ್ಥಿಗಳ ತಲಾ ಖರ್ಚು ರೂ. 18.33 ಲಕ್ಷ ಎಂದು ಲೆಕ್ಕ ಹಾಕಲಾಗಿದೆ. ಈ ಕಾರ್ಯಕ್ರಮಕ್ಕಾಗಿ 800 ಬಸ್ಸುಗಳನ್ನೂ ಗೊತ್ತುಪಡಿಸಲಾಗಿತ್ತು. ಇವುಗಳಲ್ಲಿ 150 ಬಸ್ಸುಗಳು ಗೋವಾದ ಕದಂಬ ಸಾರಿಗೆ ನಿಗಮಕ್ಕೆ ಸೇರಿದ್ದರೆ ಉಳಿದವು ಕೆಎಸ್ಸಾರ್ಟಿಸಿ ಬಸ್ಸುಗಳಾಗಿದ್ದವು. ಕೆಎಸ್ಸಾರ್ಟಿಸಿ ತನ್ನ ಶುಲ್ಕವನ್ನು ರೂ 1.35 ಕೋಟಿ ಎಂದು ನಿಗದಿಪಡಿಸಿದ್ದರೆ ಗೋವಾದ ಸಾರಿಗೆ ನಿಗಮವು ವಿವರಗಳನ್ನು ಒದಗಿಸಿಲ್ಲ. ಈ ಬಸ್ಸುಗಳ ವೆಚ್ಚವನ್ನೂ ಸೇರಿಸಿದರೆ ಆರು ಅಭ್ಯರ್ಥಿಗಳು ಚುನಾವಣಾ ಆಯೋಗ ನಿಗದಿಪಡಿಸಿದ ಗರಿಷ್ಠ ಖರ್ಚು ಮಿತಿಯಾದ ತಲಾ ರೂ. 40 ಲಕ್ಷ ಮೀರಲಿದ್ದಾರೆ.

ಒಟ್ಟು ಖರ್ಚಿನ ಬಗ್ಗೆ ಜಿಲ್ಲಾ ಖರ್ಚುವೆಚ್ಚ ಸಮಿತಿ ಆರು ಮಂದಿಯಿಂದ ಉತ್ತರ ಕೇಳಿದೆ. ಆದರೆ ಅವರು ಅಂದಾಜು ಖರ್ಚು ಮೊತ್ತವನ್ನು ಪ್ರಶ್ನಿಸಿದ್ದಾರೆ ಎಂದು ಜಿಲ್ಲಾ ಖರ್ಚುವೆಚ್ಚ ವೀಕ್ಷಕ ಸತೀಶ್‌ ಜಿ ಪವಾರ್‌ ಹೇಳಿದ್ದಾರೆ.

ಈ ಮೋದಿ ರ್ಯಾಲಿ ಹೊರತುಪಡಿಸಿ ಅಭ್ಯರ್ಥಿಗಳು ಇತರ ರ್ಯಾಲಿಗಳು, ಕರಪತ್ರಗಳು ಮತ್ತು ಪ್ರಚಾರಕ್ಕಾಗಿ ಹಣ ವಿನಿಯೋಗಿಸಿದ್ದಾರೆ. ಕೆಲವರು ರ್ಯಾಲಿಯೊಂದರಲ್ಲಿ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ಜೊತೆಗೂ ವೇದಿಕೆ ಹಂಚಿಕೊಂಡಿದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಬಸ್ಸುಗಳನ್ನು ಪ್ರಧಾನಿ ರ್ಯಾಲಿಗೆ ತಾವು ಗೊತ್ತು ಪಡಿಸಿದ್ದಲ್ಲ ಎಂದು ಎಲ್ಲಾ ಆರು ಮಂದಿ ಹೇಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದ್ದ ಮೋದಿ ಅಭಿಮಾನಿಗಳು ಸಾರಿಗೆ ಏರ್ಪಾಟು ಮಾಡಿದ್ದಾರೆ ಎಂದು ದಿನಕರ್‌ ಶೆಟ್ಟಿ ಹೇಳಿದ್ದಾರಲ್ಲದೆ ಮೋದಿ ಮತ್ತು ಆದಿತ್ಯನಾಥ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರ ಸಹಿತ ಒಟ್ಟು ಖರ್ಚುವೆಚ್ಚ ರೂ. 37 ಲಕ್ಷ ಎಂದು ಹೇಳಿದ್ದಾರೆ.

ಹೆಬ್ಬಾರ್‌ ಪ್ರತಿಕ್ರಿಯಿಸಿ ತಮಗೆ ಚುನಾವಣಾ ಆಯೋಗದಿಂದ ಯಾವುದೇ ನೋಟಿಸ್‌ ಬಂದಿಲ್ಲ, ದೊರೆತರೆ ಕಾನೂನಾತ್ಮಕ ಪ್ರಕ್ರಿಯೆ ಮೂಲಕ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಪ್ರಭುಲಿಂಗ ಕಾವಳಿಕಟ್ಟಿ ಪ್ರತಿಕ್ರಿಯಿಸಿ ಕಾರ್ಯಕ್ರಮಕ್ಕ ಬಸ್ಸುಗಳನ್ನು ಗೊತ್ತುಪಡಿಸಿದ್ದ ಜನರ ವಿರುದ್ಧ (ಸುಮಾರು 150 ಮಂದಿ) ಎಫ್‌ಐಆರ್‌ ಅನ್ನು  ಚುನಾವಣಾ ಅಧಿಕಾರಿಗಳು ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.

ಗೋವಾ ಸರ್ಕಾರಕ್ಕೂ ಪತ್ರ ಬರೆದು ಕದಂಬ ಬಸ್ಸುಗಳ ಬಳಕೆ ವೆಚ್ಚ ಬಗ್ಗೆ ಮಾಹಿತಿ ಕೇಳಲಾಗಿದೆ ಎಂದು ಅವರು ಹೇಳಿದ್ದಾರೆ.

Similar News