×
Ad

ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಯತ್ನಾಳ್ ಸೂಕ್ತ: ಸಂಸದ ಪ್ರತಾಪ್ ಸಿಂಹ

Update: 2023-06-19 21:33 IST

ಮೈಸೂರು,ಜೂ.19: 'ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಹೆಸರು ಕೇಳಿಬರುತ್ತಿದೆ. ಹಾಗಾಗಿ ಅವರೇ ಸೂಕ್ತವಾದ ವ್ಯಕ್ತಿ' ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವಿಧಾನಸಭೆ ವಿರೋಧಪಕ್ಷದ ನಾಯಕನ ಆಯ್ಕೆ ಶೀಘ್ರದಲ್ಲೇ ಆಗುತ್ತದೆ. ಎದೆಗಾರಿಕೆ ಇರುವ ನಾಯಕ ಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಬಸವಗೌಡ ಪಾಟೀಲ ಯತ್ನಾಳ ಹೆಸರು ಕೇಳಿಬರುತ್ತಿದೆ. ರಾಷ್ಟ್ರೀಯತೆ, ಹಿಂದುತ್ವ ಎಲ್ಲವನ್ನೂ ಅವರು ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಅವರ ಹೆಸರಿಗೊಂದು ಹವಾ ಇದೆ' ಎಂದು ಸಮರ್ಥಿಸಿಕೊಂಡರು.

ಪ್ರತಾಪ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ ಎಂಬ ಸಚಿವ ಎಂ.ಬಿ. ಪಾಟೀಲ ಹೇಳಿಕೆಗೆ ತಿರುಗೇಟು ನೀಡಿದ ಅವರು, 'ಅವರಿಗೆ ಈಗ ದೊರೆತಿರುವ ಖಾತೆಯಲ್ಲಿ ಕೇವಲ ಚಿಲ್ಲರೆ ಸಿಗುತ್ತದೆ. ಕುಳಿತ ಕಡೆಯೇ ಕಂತೆ ಕಂತೆ ದುಡ್ಡು ಬರುವ ಖಾತೆ ಸಿಗಲಿಲ್ಲವೆಂದು ವಿಲವಿಲ ಒದ್ದಾಡುತ್ತಿದ್ದಾರೆ. ಅವರಿಗೆ ಚಿಲ್ಲರೆ, ನೋಟುಗಳ ಬಗ್ಗೆ ಮಾತ್ರವೇ ಚಿಂತೆ. ಸಿದ್ದರಾಮಯ್ಯ ಓಲೈಕೆಯೇ ತಮ್ಮ ಜವಾಬ್ದಾರಿ ಎಂದುಕೊಂಡಿದ್ದಾರೆ. ಅವರ ಬಂದೂಕಿಗೆ ಹೆಗಲು ಕೊಡುವುದೇ ನಿಮ್ಮ ಕೆಲಸವೇ ಪಾಟೀಲರೇ' ಎಂದು ಕೇಳಿದರು.

'ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಬಗ್ಗೆಯೂ ವ್ಯಂಗ್ಯವಾಡಿದ್ದಾರೆ. ಪದೇ ಪದೇ ಅವರ ಬಗ್ಗೆ ಏಕೆ ಮಾತನಾಡುತ್ತೀರಿ? ಬ್ರಾಹ್ಮಣರ ಮೇಲೆ ಏಕಿಷ್ಟು ದ್ವೇಷ? ಬಸವೇಶ್ವರರು ಮೂಲತಃ ಬ್ರಾಹ್ಮಣರಲ್ಲವೇ? ಸಂತೋಷ್ ನಿಮಗೆ ತಿವಿದಿದ್ದಾರಾ, ನೀವು ನಿಜವಾಗಲೂ ಲಿಂಗಾಯತರಾ?' ಎಂದು ಪ್ರಶ್ನಿಸಿದರು.

'ನಾನೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ನೇರವಾಗಿ ಹೇಳುವ ಧೈರ್ಯ ಸಿದ್ದರಾಮಯ್ಯಗೆ ಇಲ್ಲ. ಪುಕ್ಕಲುತನವೇ ಅದಕ್ಕೆ ಕಾರಣ'  ಎಂದು ಸಂಸದ ಪ್ರತಾಪ ಸಿಂಹ ಟೀಕಿಸಿದರು.

'ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಎಂ.ಬಿ. ಪಾಟೀಲ ಹೇಳಿದ್ದಾರೆ. ಅಧಿಕಾರ ಬಿಟ್ಟು ಕೊಡುವ ಇರಾದೆ ಸಿದ್ದರಾಮಯ್ಯ ಅವರಿಗಿಲ್ಲ. ಇದನ್ನು ತನ್ನ ಚೇಲಾಪಡೆಯ ಮೂಲಕ ಹೇಳಿಸುತ್ತಿದ್ದಾರೆ' ಎಂದು ಆರೋಪಿಸಿದರು.

'ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಾತ್ರ ದೊಡ್ಡದಿದೆ. ಆದರೆ, ಕಾಂಗ್ರೆಸ್ ದೊಡ್ಡ ಮನಸ್ಸಿನಿಂದ ಸಿದ್ದರಾಮಯ್ಯ ಅವರನ್ನು 2ನೇ ಬಾರಿಗೆ ಅವಕಾಶ ಕೊಟ್ಟಿದೆ. ಆದರೆ, ಅಂತಹ ದೊಡ್ಡ ಮನಸ್ಸು ಸಿದ್ದರಾಮಯ್ಯಗಿಲ್ಲ' ಎಂದು ದೂರಿದರು.

Similar News