×
Ad

ಕೈಗಾರಿಕಾ ಖಾತೆಯ ಮಹತ್ವದ ಬಗ್ಗೆ ಮೋದಿ ಬಳಿ ಕೇಳಿ ತಿಳಿದುಕೊಳ್ಳಿ: ಪ್ರತಾಪ್ ಸಿಂಹಗೆ ಎಂ.ಬಿ.ಪಾಟೀಲ್ ತಿರುಗೇಟು

Update: 2023-06-20 17:42 IST

ಬೆಂಗಳೂರು, ಜೂ.20: ಬಿಜೆಪಿ ಸಂಸದ ಪ್ರತಾಪ್ ಸಿಂಹ ಚೇಳು ಇದ್ದಂತೆ, ಈತನನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಾಕಿಕೊಂಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕಿಡಿಗಾರಿದ್ದಾರೆ.

ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಪ್ರತಿಯೊಬ್ಬರನ್ನೂ ಗೌರವಿಸುವ ಸಂಸ್ಕಾರವುಳ್ಳವರು. ಪ್ರತಾಪ್ ಸಿಂಹ ಅವರು ನನ್ನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚೇಲಾ ಎಂದಿದ್ದಾರೆ. ಆದರೆ, ಈ ವ್ಯಕ್ತಿ ಸಂತೋಷ್ ಅವರು ಸಾಕಿಕೊಂಡಿರುವ ಒಂದು ಚೇಳು. ಅವರು ಇಂಥ ಹಲವು ಚೇಳುಗಳನ್ನು ಸಾಕಿಕೊಂಡಿದ್ದಾರೆ. ಹೀಗಾಗಿ ದಿನವೂ ಅವರು ಇಂತಹ ಚೇಳುಗಳನ್ನು ಬಿಟ್ಟು, ಮಜಾ ತೆಗೆದುಕೊಳ್ಳುತ್ತಿರುತ್ತಾರೆ ಎಂದು ಟೀಕಿಸಿದರು.

ನನ್ನದು ಚಿಲ್ಲರೆ ಖಾತೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಕೈಗಾರಿಕಾ ಖಾತೆಯ ಮಹತ್ವದ ಬಗ್ಗೆ ಅವರು ಪ್ರಧಾನಿ ಮೋದಿ ಅವರ ಬಳಿ ಕೇಳಿ ತಿಳಿದುಕೊಂಡರೆ ಒಳ್ಳೆಯದು. ಖಾತೆ ಯಾವುದಾದರೂ ನಾವು ಮಾಡುವ ಕೆಲಸ ಮುಖ್ಯ. ಇಂತಹ ಪ್ರಾಥಮಿಕ ಸಂಗತಿಗಳು ಒಬ್ಬ ಸಂಸದರಿಗೆ ಗೊತ್ತಿಲ್ಲದೆ ಇರುವುದು ವಿಷಾದನೀಯ ಸಂಗತಿ ಎಂದು ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು.

ನಾನು ಬಿ.ಎಲ್.ಸಂತೋಷ್ ಅವರ ಬಗ್ಗೆ ಮಾತನಾಡಿದ ತಕ್ಷಣ ಅದು ಇಡೀ ಬ್ರಾಹ್ಮಣ ಸಮುದಾಯವನ್ನು ಬೈದಂತಲ್ಲ. ನನ್ನ ಮತ್ತು ಬ್ರಾಹ್ಮಣರ ನಡುವಿನ ಸಂಬಂಧ ಎಷ್ಟೊಂದು ಮಧುರವಾಗಿದೆ. ಬೇಕಿದ್ದರೆ ಒಮ್ಮೆ ವಿಜಯಪುರಕ್ಕೆ ಬಂದು ನೋಡಲಿ. ಪ್ರತಾಪ್ ಸಿಂಹ ಅವರು ದಿನವೂ ನನ್ನ ವಿರುದ್ಧ ವೈಯಕ್ತಿಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರ ಮನಃಸ್ಥಿತಿ ತುಂಬಾ ಚಿಂತಾಜನಕವಾಗಿರುವಂತಿದೆ ಎಂದು ಅವರು ಹೇಳಿದರು.

ನಮ್ಮ ತಂದೆ ಮತ್ತು ನಾನು ಬ್ರಾಹ್ಮಣರ ಜೊತೆ ಮಧುರ ಸಂಬಂಧಕ್ಕೆ ಹೆಸರಾಗಿದ್ದೇವೆ. ಹಲಗಲಿಯ ದೇವಸ್ಥಾನ, ವಿಜಯಪುರದ ಹನುಮಂತನ ದೇವಸ್ಥಾನ ಸೇರಿದಂತೆ ಬ್ರಾಹ್ಮಣ ಸಮುದಾಯದ ಅನೇಕ ಕೆಲಸಗಳನ್ನು ನಾನು ಹೃತ್ಪೂರ್ವಕವಾಗಿ ಮಾಡಿಕೊಟ್ಟಿದ್ದೇನೆ. ಹಾಗೆಯೇ ಆ ಸಮಾಜವೂ ನನ್ನೊಂದಿಗೆ ಅಭಿಮಾನದಿಂದ ಗುರುತಿಸಿಕೊಂಡಿದೆ. ಇವೆಲ್ಲ ಗೊತ್ತಿಲ್ಲದೆ ಪ್ರತಾಪ್ ಸಿಂಹ ಕೀಳು ಅಭಿರುಚಿಯ ವಿಕೃತಿಯನ್ನು ತೋರಿಸುತ್ತಿದ್ದಾರೆ ಎಂ.ಬಿ.ಪಾಟೀಲ್ ನುಡಿದರು.

Similar News