×
Ad

ಮದುವೆ ಬಳಿಕ ದೈಹಿಕ ಸಂಬಂಧ ನಿರಾಕರಿಸುವುದು ಅಪರಾಧವಲ್ಲ: ಹೈಕೋರ್ಟ್

Update: 2023-06-20 22:26 IST

ಬೆಂಗಳೂರು, ಜೂ.20: ದೈಹಿಕ ಸಂಬಂಧ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಡ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ. 

ಐಪಿಸಿ ಸೆಕ್ಷನ್ 498ಎ ಅಡಿ ತನ್ನ ಪೋಷಕರು ಹಾಗೂ ತನ್ನ ವಿರುದ್ಧ ಪೊಲೀಸರು ಸಲ್ಲಿಸಿದ ಆರೋಪಪಟ್ಟಿ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು ಈ ಆದೇಶ ನೀಡಿದೆ.  

ಹಿಂದೂ ವಿವಾಹ ಕಾಯಿದೆ-1955ರ ಪ್ರಕಾರ, ಪತಿಯಿಂದ ದೈಹಿಕ ಸಂಬಂಧವನ್ನು ನಿರಾಕರಿಸುವುದು ಕ್ರೌರ್ಯಕ್ಕೆ ಸಮಾನವಾಗಿದೆ. ಆದರೆ, ಐಪಿಸಿ ಸೆಕ್ಷನ್ 489ಎ ಅಡಿಯಲ್ಲಿ ಈ ಪ್ರಕರಣ ಬರುವುದಿಲ್ಲ ಮತ್ತು ಇದು ಅಪರಾಧವೂ ಅಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ. 

ದೂರುದಾರ ಪತ್ನಿ ಆರೋಪಿಸಿರುವಂತೆ, ಮದುವೆಯ ಬಳಿಕ ಪತಿ ದೈಹಿಕ ಸಂಪರ್ಕದ ಬಗ್ಗೆ ಆಸಕ್ತಿ ಹೊಂದಿರಲಿಲ್ಲ. ಬದಲಿಗೆ ಆಧ್ಯಾತ್ಮಿಕ ವಿಚಾರದಲ್ಲಿ ಆಸಕ್ತಿ ಹೊಂದಿದ್ದರು. ಮದುವೆ ದೈಹಿಕ ಸುಖಕ್ಕಾಗಿ ಅಲ್ಲ, ಆತ್ಮಗಳ ಸಮ್ಮಿಲನಕ್ಕಾಗಿ ಎನ್ನುತ್ತಿದ್ದರು. ಬ್ರಹ್ಮಕುಮಾರಿ ಸಿಸ್ಟರ್ ಶಿವಾನಿ ಅವರ ವಿಡಿಯೋಗಳನ್ನು ನೋಡುವಂತೆ ಪತಿ ಒತ್ತಾಯಿಸುತ್ತಿದ್ದರು. ಇಂತಹುದೇ ವಿಡಿಯೋಗಳನ್ನು ಬೆಡ್‍ರೂಮ್, ಊಟದ ಹಾಲ್‍ನಲ್ಲಿಯೂ ಕೇಳುತ್ತಿದ್ದರು ಮತ್ತು ಕೇಳಿಸಲು ಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. 

ಪತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಮುಂದುವರಿಸಲಾಗುವುದಿಲ್ಲ. ಇದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಮತ್ತು ತಪ್ಪು ನ್ಯಾಯಕ್ಕೆ ಕಾರಣವಾಗುತ್ತದೆ ಎಂದು ಪೀಠವು ಅಭಿಪ್ರಾಯಪಟ್ಟಿತು. 

2019ರ ಡಿಸೆಂಬರ್ 18 ರಂದು ಈ ಜೋಡಿ ವಿವಾಹವಾಗಿತ್ತು. ಮಹಿಳೆ ತನ್ನ ಪತಿಯ ಮನೆಯಲ್ಲಿ ಕೇವಲ 28 ದಿನಗಳು ಮಾತ್ರ ಜೀವನ ನಡೆಸಿದ್ದರು. ಬಳಿಕ 2022 ಫೆಬ್ರವರಿ 5 ರಂದು ಪತ್ನಿ ಐಪಿಸಿ ಸೆಕ್ಷನ್ 498 ಎ ಅಡಿ ಹಾಗೂ ವರದಕ್ಷಿಣೆ ಕಾಯ್ದೆಯಡಿ ಪತಿ ಹಾಗೂ ಆತನ ಪೋಷಕರ ವಿರುದ್ಧ ಮೊಕದ್ದಮೆ ಹೂಡಿದ್ದರು. ಇದರ ಜೊತೆಗೆ ಕೌಟುಂಬಿಕ ನ್ಯಾಯಾಲಯದಲ್ಲಿಯೂ ಮದುವೆ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು.

ಪತ್ನಿ ಸಲ್ಲಿಸಿದ ದೂರಿನ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಇದರ ವಿರುದ್ಧ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಕ್ರಿಮಿನಲ್ ಪ್ರಕ್ರಿಯೆಗಳನ್ನು ಮುಂದುವರಿಸಲು ಅನುಮತಿ ನೀಡಲಾಗುವುದಿಲ್ಲ. ಅದು ಕಾನೂನಿನ ಪ್ರಕ್ರಿಯೆಯ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಹೇಳಿ ಪ್ರಕರಣ ರದ್ದುಗೊಳಿಸಿ ಆದೇಶ ನೀಡಿದೆ.

Similar News