ಬಿ ಸಿ ರೋಡ್: ಯುವತಿ ಹತ್ಯೆ ಪ್ರಕರಣ; ಆರೋಪಿಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ
ಮೃತ ಲಾವಣ್ಯ | ಆರೋಪಿ ಚೇತನ್
ಮಂಗಳೂರು: ಬಂಟ್ವಾಳ ತಾಲೂಕಿನ ಬಿ ಸಿ ರೋಡ್‌ನ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಕಕ್ಯಪದವು ಸಮೀಪದ ಉಳಿ ಗ್ರಾಮದ ಕೊಡಂಗೆ ನಿವಾಸಿ ಲಾವಣ್ಯ ಎಂಬ ಯುವತಿಯನ್ನು ಬೆಳ್ತಂಗಡಿ ತಾಲೂಕಿನ ಓಡಿಲ್ನಾಳದ ಚೇತನ್ ಎಂಬ ಯುವಕ ತಲವಾರಿನಿಂದ ಕಡಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಜಿಲ್ಲಾ ಸಮಿತಿ ತಿಳಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಮಿತಿಯು, ಈ ಅಮಾನವೀಯ ಘಟನೆಯು ಜಿಲ್ಲೆಯ ನಾಗರಿಕರನ್ನು ತಲೆತಗ್ಗಿಸುವಂತೆ ಮಾಡಿದೆ. ಜನರ ಬದುಕುವ ಹಕ್ಕನ್ನೇ ಕಸಿಯುವಂತಹ ಇಂತಹ ನರಹಂತಕರಿಂದ ವಿದ್ಯಾವಂತರ ಜಿಲ್ಲೆ, ಬುದ್ದಿವಂತರ ಜಿಲ್ಲೆ ಎನಿಸಿಕೊಂಡಿರುವ ಜಿಲ್ಲೆಯ ಮಾನ ಹರಾಜು ಆಗಿದೆ. ಕಳೆದ ಎರಡು ವರ್ಷಗಳಿಂದ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳಿಂದ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಘಟನೆಗಳು ಕಡಿಮೆಯಾಗಿದ್ದು, ಮತ್ತೆ ಬಾಲಬಿಚ್ಚುವಂತೆ ಕಾಣುತ್ತಿದೆ ಎಂದು ಹೇಳಿದೆ.
ಇದೀಗ ಪೊಲೀಸ್ ಇಲಾಖೆಯು ಕೊಲೆಗಾರನನ್ನು ಬಂಧಿಸಿದ್ದು ಸ್ವಾಗತಾರ್ಹ. ಇಲಾಖೆಯು ಕೂಡಲೇ ಕೊಲೆಗಾರನ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ), ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ಜಿಲ್ಲಾ ಸಮಿತಿಯು ಒತ್ತಾಯಿಸಿದೆ.