ಬೆಂಗಳೂರು | ಮೃತದೇಹ ಮುಂದಿಟ್ಟುಕೊಂಡು ಲಂಚ ಸ್ವೀಕಾರ: ತಂದೆಯ ಭಾವುಕ ಪೋಸ್ಟ್ ವೈರಲ್, ಪಿಎಸ್ಸೈ, ಕಾನ್‍ಸ್ಟೇಬಲ್ ಅಮಾನತು!
ಬೆಂಗಳೂರು : ತನ್ನ ಮಗಳ ಮೃತದೇಹವನ್ನು ಮುಂದಿಟ್ಟುಕೊಂಡು ಎದುರಿಸಿದ ಕಿರುಕುಳ ಮತ್ತು ಭ್ರಷ್ಟಾಚಾರದ ಬಗ್ಗೆ ತಂದೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡಿದ್ದ ಪೋಸ್ಟ್ ವೈರಲ್ ಆದ ಬೆನ್ನಲ್ಲೇ, ಬೆಳ್ಳಂದೂರು ಠಾಣೆಯ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಪಿಎಸ್ಸೈ) ಮತ್ತು ಕಾನ್‍ಸ್ಟೇಬಲ್‍ರನ್ನು ಗುರುವಾರ ಅಮಾನತುಗೊಳಿಸಲಾಗಿದೆ.
ಬೆಳ್ಳಂದೂರು ಠಾಣೆಯ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್(ಪಿಎಸ್ಸೈ) ಸಂತೋಷ್, ಕಾನ್‍ಸ್ಟೇಬಲ್ ಗೋರಕ್‍ನಾಥ್ ಅವರನ್ನು ಅಮಾನತುಗೊಳಿಸಿ ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಕೆ.ಪರಶುರಾಮ ಆದೇಶಿಸಿದ್ದಾರೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‍ನ (ಬಿಪಿಸಿಎಲ್) ನಿವೃತ್ತ ಮುಖ್ಯ ಹಣಕಾಸು ಅಧಿಕಾರಿ ಶಿವಕುಮಾರ್ ಕೆ. ಎಂಬುವವರು ಸೆಪ್ಟೆಂಬರ್‍ನಲ್ಲಿ ತಮ್ಮ 34 ವರ್ಷದ ಪುತ್ರಿ ಅಕ್ಷಯಾ ಅವರ ಮೆದುಳಿನಲ್ಲಿನ ರಕ್ತಸ್ರಾವದಿಂದಾಗಿ ಮೃತಪಟ್ಟ ನಂತರ ಸಂಕಷ್ಟದ ಸಮಯದಲ್ಲಿಯೂ ತಾವು ಅನುಭವಿಸಿದ ಯಾತನೆಯನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದರು.
‘ಮಗಳ ಶವ ಸಾಗಿಸಲು ಆಂಬ್ಯುಲೆನ್ಸ್ ವಾಹನಕ್ಕೆ ಲಂಚ ನೀಡಬೇಕಾಯಿತು. ಮಗಳ ಶವದ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಲು ಲಂಚ ಕೇಳಿದರು. ಎಫ್‍ಐಆರ್ ದಾಖಲಿಸಿಕೊಳ್ಳಲು ಬೆಳ್ಳಂದೂರು ಠಾಣೆಯ ಪೊಲೀಸರು ಲಂಚ ಕೇಳಿದರು. ಬೆಳ್ಳಂದೂರು ಠಾಣೆಯ ಇನ್‍ಸ್ಪೆಕ್ಟರ್ ಅಹಂಕಾರದಿಂದ ವರ್ತಿಸಿದರು. ಶವ ಸಂಸ್ಕಾರ ಮಾಡಲು ಚಿತಾಗಾರಕ್ಕೆ ಹೋದಾಗ ಅಲ್ಲಿಯೂ ಲಂಚ ನೀಡಬೇಕಾಯಿತು. ಮಗಳ ಮರಣ ಪ್ರಮಾಣಪತ್ರ ಪಡೆಯಲು ಕೂಡಾ ಪಾಲಿಕೆಯ ಅಧಿಕಾರಿಗಳಿಗೂ ಲಂಚ ಕೊಡಬೇಕಾಯಿತು. ಮಗಳನ್ನು ಕಳೆದುಕೊಂಡ ತಂದೆಯ ಬಗ್ಗೆ ಯಾರೊಬ್ಬರಿಗೂ ಸಹಾನುಭೂತಿ ಇರಲಿಲ್ಲ. ನನ್ನ ಬಳಿ ಕೊಡಲು ಹಣವಿತ್ತು. ಆದರೆ ಬಡವರು ಏನು ಮಾಡುತ್ತಾರೆ?’ ಎಂದು ಶಿವಕುಮಾರ್ ಅಳಲು ತೋಡಿಕೊಂಡಿದ್ದರು.
ಶಿವಕುಮಾರ್ ಅವರ ಅನುಭವದ ಬಗ್ಗೆ ದುಃಖ ವ್ಯಕ್ತಪಡಿಸಿ, ಅನೇಕರು ಬೆಂಗಳೂರು ನಗರ ಪೊಲೀಸ್ ಮತ್ತು ವೈಟ್‍ಫೀಲ್ಡ್ ವಿಭಾಗದ ಡಿಸಿಪಿ ಖಾತೆಗಳಿಗೆ ‘ಎಕ್ಸ್’ ನಲ್ಲಿರುವ ಪೋಸ್ಟ್ ಗಳನ್ನು ಟ್ಯಾಗ್ ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದರು.
ಈ ಸಂಬಂಧ ಡಿಸಿಪಿ ಕಚೇರಿಯು ಉತ್ತರಿಸಿದ್ದು, ಶಿವಕುಮಾರ್ ಅವರ ‘ಎಕ್ಸ್’ ಖಾತೆಯಲ್ಲಿ ಉಲ್ಲೇಖಿಸಲಾದ ಘಟನೆಗೆ ಸಂಬಂಧಿಸಿದಂತೆ, ಬೆಳ್ಳಂದೂರು ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಮತ್ತು ಭಾಗಿಯಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಇಲಾಖೆ ಯಾವುದೇ ಸಂದರ್ಭದಲ್ಲೂ ಅಸಭ್ಯ ಅಥವಾ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ ಎಂದು ತಿಳಿಸಿದೆ.