ಪರೀಕ್ಷೆಗೆ ಸಂಬಂಧಿಸಿದ ಶಾಲಾ ಶಿಕ್ಷಣ ಇಲಾಖೆಯ ನಿರ್ಧಾರ ಮರು ಪರಿಶೀಲಿಸಲು ಪ್ರೊ.ಬರಗೂರು ರಾಮಚಂದ್ರಪ್ಪ ಒತ್ತಾಯ
ಬೆಂಗಳೂರು : ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆಯು ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ನಿರ್ಧಾರವನ್ನು ಕೈಗೊಂಡಿದ್ದು, ಈ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರದಂದು ಪತ್ರವನ್ನು ಬರೆದಿದ್ದಾರೆ.
ಕೇಂದ್ರೀಯ ಶಾಲೆಗಳ ಪದ್ಧತಿಯನ್ನು ಅನುಸರಿಸುವಂತೆ ಗಣೇಶ್ ಭಟ್ ಎನ್ನುವವರ ಸಮಿತಿಯು ನೀಡಿದ ಸಲಹೆ ಮೇರೆಗೆ ರಾಜ್ಯ ಶಿಕ್ಷಣ ಇಲಾಖೆಯು ಕೇಂದ್ರೀಯ ಶಾಲೆಗಳ ಪದ್ಧತಿಯಂತೆ ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಮಾಡಿದೆ. ಮೊದಲನೆಯದಾಗಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಿರಾಕರಿಸಿದ ರಾಜ್ಯ ಸರಕಾರದ ನಿಲುವನ್ನು ರಾಜ್ಯ ಶಿಕ್ಷಣ ಇಲಾಖೆಯೇ ಉಲ್ಲಂಘಿಸಿ ರಾಜ್ಯದ ಶೈಕ್ಷಣಿಕ ಸ್ವಾಯತ್ತತೆಗೆ ಧಕ್ಕೆ ತಂದಿದೆ ಎಂದು ಅವರು ಖಂಡಿಸಿದ್ದಾರೆ.
ಮೊದಲಿದ್ದ ಪರೀಕ್ಷಾ ಪದ್ಧತಿಯ ದೋಷಗಳೇನು ಎಂದು ತಿಳಿಸದೆ ಅಥವಾ ದೋಷಗಳೇ ಇಲ್ಲದೆ, ಹೊಸ ಪದ್ಧತಿಯನ್ನು ಅಳವಡಿಸಿ, ಆಂತರಿಕ ಮೌಲ್ಯಾಮಾಪನಕ್ಕೆ 20 ಅಂಕಗಳು ಮತ್ತು ಲಿಖಿತ ಉತ್ತರಕ್ಕೆ 13 ಅಂಕಗಳನ್ನು ನಿಗದಿ ಪಡಿಸಿ ತೇರ್ಗಡೆಯ ಮಾನದಂಡವನ್ನು ರೂಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯಾವ ಯಾವ ಪಾಠಗಳಲ್ಲಿ ಎಷ್ಟೆಷ್ಟು ಅಂಕಗಳಿಗೆ ಎಷ್ಟೆಷ್ಟು ಪ್ರಶ್ನೆ ಕೇಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯೇ ನಿಗದಿ ಮಾಡಿ ಪಟ್ಟಿ ನೀಡಿದೆ. ಅಂದರೆ ಪಾಠ ಮಾಡಿದವರಿಗೆ ಪ್ರಶ್ನೆಗಳನ್ನು ರೂಪಿಸುವ ಸ್ವಾತಂತ್ರ್ಯವನ್ನೂ ಮೊಟಕುಗೊಳಿಸಲಾಗಿದೆ. ಇಂಥದೇ ವಿಷಯದ ಪ್ರಶ್ನೆ ಎಂದು ಪೂರ್ವ ನಿರ್ಧಾರ ಮಾಡಿ ಅಧ್ಯಾಪಕರು ಅಷ್ಟಕ್ಕೇ ಸೀಮಿತಗೊಳಿಸಿ ಪಾಠ ಮಾಡುವ ‘ಸೌಲಭ್ಯ' ಒದಗಿಸಲಾಗಿದೆ. ಇದರಿಂದ ಪೂರ್ಣಬೋಧನೆ ಇಲ್ಲವಾಗಬಹುದು ಎಂದು ಪ್ರೊ. ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಪಾಠಾಧಾರಿತ ಮೌಲ್ಯಾಂಕನದ ಪ್ರಕಾರ ಎಲ್ಲ ಪಠ್ಯವಿಷಯಗಳನ್ನೂ ಸೇರಿಸಿ, ಒಂದು ಶೈಕ್ಷಣಿಕ ವರ್ಷದಲ್ಲಿ ಸುಮಾರು 359 ಟೆಸ್ಟ್ ಗಳನ್ನು ಮಾಡಬೇಕಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸವನ್ನು ಅಳೆಯಲು ಟೆಸ್ಟ್ ಗಳು(ಕಿರುಪರೀಕ್ಷೆಗಳು) ಬೇಕು. ಆದರೆ ಇಡೀ ವರ್ಷ ಟೆಸ್ಟ್ ಗಳೇ ತುಂಬಿಕೊಂಡಿದ್ದರೆ ಗುಣಮಟ್ಟ ಹೆಚ್ಚುತ್ತದೆ ಎನ್ನುವುದು ಭ್ರಮೆ. ಮಕ್ಕಳು ಪ್ರಶಾಂತ ಮನಸ್ಸಿನಿಂದ ಕಲಿಯಬೇಕು. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಲು ಸಮಯಾವಕಾಶ ಬೇಕು ಎಂದು ಅವರು ಹೇಳಿದ್ದಾರೆ.
ಇಂತಹ ಸಂದರ್ಭದಲ್ಲಿ, ಸಮಾಜಮುಖಿ ಚಿಂತನೆಯ ತಮ್ಮ ಮಧ್ಯಪ್ರವೇಶದ ಅಗತ್ಯವಿದೆ. ಈ ಬಗ್ಗೆ ಆಯ್ದ ಶಿಕ್ಷಣಾಸಕ್ತರ ಜೊತೆಗೆ ಸಮಾಲೋಚನೆ ಹಾಗೂ ಸಚಿವ ಸಂಪುಟದಲ್ಲಿ ಸಮಗ್ರ ಚರ್ಚೆ ನಡೆಯಬೇಕು. ಹಾಗೆಯೇ ರಾಜ್ಯ ಶಿಕ್ಷಣ ನೀತಿಯ ವರದಿ ಬಗ್ಗೆ ವಿಸ್ತ್ರತ ಚರ್ಚೆ ನಡೆದು, ಶೈಕ್ಷಣಿಕ ನೀತಿ ರೂಪುಗೊಳ್ಳುವವರೆಗೆ ಶಾಲಾ ಶಿಕ್ಷಣ ಇಲಾಖೆಯ ಅತುರದ ಕ್ರಮಗಳಿಗೆ ತಡೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.