ʼಶರಾವತಿ ಭೂಗತ ಜಲವಿದ್ಯುತ್ ಯೋಜನೆʼ ರದ್ದುಪಡಿಸಲು ಕೋರಿ ಮುಖ್ಯ ನ್ಯಾಯಮೂರ್ತಿಗೆ ಪತ್ರ
ಬೆಂಗಳೂರು, ಅ.31: ಶಿವಮೊಗ್ಗ ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ಸುಮಾರು 16ಸಾವಿರಕ್ಕೂ ಹೆಚ್ಚು ದೈತ್ಯಾಕಾರದ ಮರಗಳನ್ನು ಕತ್ತರಿಸುವ ಜೊತೆಗೆ ಅಪರೂಪದ ಸಸ್ಯ, ಪ್ರಾಣಿ ಸಂಕುಲನಕ್ಕೆ ಧಕ್ಕೆ ಉಂಟು ಮಾಡುವ ‘ಶರಾವತಿ ಭೂಗತ ಜಲವಿದ್ಯುತ್ ಯೋಜನೆ’ಯನ್ನು ರದ್ದು ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಒತ್ತಾಯಿಸಿದ್ದಾರೆ.
ಶುಕ್ರವಾರ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿರುವ ಅವರು, ರಾಜ್ಯ ಸರಕಾರವು ‘ಶರಾವತಿ ಪಂಪ್ಡ್ ಸ್ಟೋರೇಜ್ ವಿದ್ಯುತ್ ಉತ್ಪಾದನೆ ಘಟಕ’ವನ್ನು ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತಿದ್ದು, ಇದು ಅವೈಜ್ಞಾನಿಕವಾಗಿದೆ. ಯೋಜನೆಯಿಂದ ವನ್ಯಜೀವಿ, ಅಪರೂಪದ ಸಸ್ಯ ಸಂಕುಲನ ಜನಜಾನುವಾರುಗಳಿಗೆ ತೊಂದರೆ ಉಂಟಾಗುತ್ತಿದೆ ಎಂದಿದ್ದಾರೆ.
ಈ ಯೋಜನೆಯ ಅಂದಾಜು ವೆಚ್ಚ 10,500 ಕೋಟಿ ರೂ. ಆಗಿದ್ದು, ಯೋಜನೆಯ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿಯನ್ನು ನೀಡದೆ ಏಕಪಕ್ಷಿಯ ನಿರ್ಧಾರಗಳನ್ನು ತೆಗೆದುಕೊಂಡು ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿ ಉಂಟು ಮಾಡುತ್ತಿದ್ದಾರೆ. ಸರಕಾರ ಯೋಜನಾ ವರದಿಯನ್ನೇ(ಡಿಪಿಆರ್) ಗುಪ್ತವಾಗಿರಿಸಿ ಪಾರದರ್ಶಕದ ಆಡಳಿತವನ್ನು ಕಡೆಗಣಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಅರಣ್ಯ ಸಂಪತ್ತು, ಸಸ್ಯ ಸಂಪತ್ತು, ಪ್ರಾಣಿ-ಪಕ್ಷಿಗಳ ಸಂಪತ್ತು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ಭಾಗದಲ್ಲಿ 745 ಮರಗಳು, ವನ್ಯಜೀವಿ ವಲಯದಲ್ಲಿ 1,918 ಮರಗಳು, ಉತ್ತರ ಕನ್ನಡ ಭಾಗದಲ್ಲಿ 13,856 ಮರಗಳು ಹೀಗೆ ಪ್ರಕೃತಿ ಸಹಜವಾಗಿ ಬೆಳೆದು ನಿಂತಿರುವ 16,041 ಮರಗಳನ್ನು ಅಂದಾಜಿಸಿ ಕತ್ತರಿಸಲಾಗುತ್ತಿದೆ. ಸರಕಾರಿ ಪಾಠಶಾಲೆಗಳು, ದೇವಾಲಯಗಳು, ರೈತರ ಮನೆಗಳು ಮತ್ತು ಜಾನುವಾರುಗಳ ಕೊಟ್ಟಿಗೆಗಳು ಈ ಯೋಜನೆಯಿಂದ ನಾಶವಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯನ್ನು ತಡೆಯಲು ವಿವಿಧ ಪರಿಸರ ಸಂಘಟನೆಗಳು, ಪರಿಸರ ಕಾರ್ಯಕರ್ತರು, ಇನ್ನಿತರ ಸಂಘಟನೆಗಳು ಮತ್ತು ನಾಗರಿಕರು ನಿರಂತರ ಪ್ರಯತ್ನ ಪಟ್ಟರೂ, ಸರಕಾರವು ನಾಗರಿಕರ ಮನವಿಗಳನ್ನು ಕೇಳಲು ತಯಾರಿಲ್ಲದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಹೀಗಾಗಿ ಈ ಮನವಿ ಪತ್ರವನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ, ವಿಚಾರಣೆಯನ್ನು ನಡೆಸಬೇಕು ಎಂದು ಎಚ್.ವೆಂಕಟೇಶ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯನ್ನು ಒತ್ತಾಯಿಸಿದ್ದಾರೆ.