ಸಾಹಿತ್ಯ ಸಮ್ಮೇಳನದಲ್ಲಿನ ಕೈಗೊಂಡ ನಿರ್ಣಯಗಳ ಅನುಷ್ಟಾನ; ಸಭೆ ಕರೆಯಲು ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ
ಬೆಂಗಳೂರು : ಮಂಡ್ಯದಲ್ಲಿ ಜರುಗಿದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳನ್ನು ಕಾರ್ಯಗತಗೊಳಿಸಲು ಕೂಡಲೇ ಸಭೆ ಕರೆಯಬೇಕೆಂದು ಕೋರಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಪತ್ರ ಬರೆದಿದ್ದಾರೆ.
ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಭಾಷಾ ಅಭಿವೃದ್ಧಿ ಅಧಿನಿಯಮ-2022 ಅನ್ನು ಜಾರಿಗೆ ಒತ್ತಾಯಿಸುವುದು. ಸರಕಾರಿ ಶಾಲೆಗಳಿಗೆ ಕಟ್ಟಡ, ವಾಚನಾಲಯ ಸೇರಿ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವುದು. ಮಹಿಷಿ ವರದಿಯನ್ನು ಶಾಸನಬದ್ಧಗೊಳಿಸಿ ಅನುಷ್ಠಾನಗೊಳಿಸುವುದು. ಜೊತೆಗೆ, ಕನ್ನಡಿಗರ ಉದ್ಯೋಗ ಕಲ್ಪಿಸುವ ಸಂಬಂಧ ಕೋರ್ಟ್‍ಗಳಲ್ಲಿರುವ ಕೇಸುಗಳ ಇತ್ಯರ್ಥಪಡಿಸಬೇಕು.
ಧಾರವಾಡದಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶೀಘ್ರದಲ್ಲಿ ನಡೆಸಬೇಕು. ರಾಷ್ಟ್ರಕವಿ ಪ್ರಶಸ್ತಿಯನ್ನು ಘೋಷಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ಪ್ರಮುಖ ನಿರ್ಣಯಗಳ ಕುರಿತು ಚರ್ಚಿಸಲು ತಕ್ಷಣವೇ ಒಂದು ಸಭೆಯನ್ನು ಆಯೋಜಿಸಬೇಕು ಎಂದು ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.