×
Ad

ಕ್ರೀಡಾಪಟುಗಳ ಉತ್ಸಾಹಕ್ಕೆ ತಕ್ಕಂತೆ ನಮ್ಮ ಪ್ರೋತ್ಸಾಹ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಕ್ಕಳ ಮಿನಿ ಕರ್ನಾಟಕ ಕ್ರೀಡಾಕೂಟವನ್ನು ಉದ್ಘಾಟನೆ

Update: 2025-11-02 22:03 IST

ಬೆಂಗಳೂರು : ನಮ್ಮ ಸರಕಾರ ಕ್ರೀಡೆಗೆ ನಿರಂತರವಾಗಿ ಸಹಕಾರ ನೀಡುತ್ತಿದೆ. ಕ್ರೀಡಾಪಟುಗಳ ಉತ್ಸಾಹಕ್ಕೆ ತಕ್ಕಂತೆ ನಮ್ಮ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರವಿವಾರ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಮತ್ತು ರಾಜ್ಯ ಒಲಂಪಿಕ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಮಿನಿ ಕರ್ನಾಟಕ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ಸರಕಾರ ಕ್ರೀಡೆಗೆ ನಿರಂತರವಾಗಿ ಪ್ರೋತ್ಸಾಹ ಕೊಟ್ಟುಕೊಂಡೇ ಬರುತ್ತಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಇಂಥಾ ಕ್ರೀಡಾಕೂಟ ಸಹಕಾರಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿ. ಕ್ರೀಡೆಯಲ್ಲಿ ಗೆಲುವು ಸೋಲಿಗಿಂತ ಭಾಗವಹಿಸುವಿಕೆ ಅತೀ ಮುಖ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.

ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತ ಪಟುಗಳಿಗೆ ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲು ನಮ್ಮ ಸರಕಾರ ನಿರ್ಧರಿಸಿದೆ. ಪೊಲೀಸ್ ಇಲಾಖೆಯಲ್ಲಿ ಶೇ.3ರಷ್ಟು ಹುದ್ದೆಗಳು ಮತ್ತು ಇತರೆ ಇಲಾಖೆಗಳಲ್ಲಿ ಶೇ.2ರಷ್ಟು ಹುದ್ದೆಗಳನ್ನು ಒದಗಿಸಲಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ವಿಜೇತರಾಗಿ ಪದಕ ತಂದ ಕ್ರೀಡಾಪಟುಗಳಿಗೆ ಉತ್ತಮ ನಗದು ಬಹುಮಾನವನ್ನೂ ನೀಡಲಾಗುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ಗೋವಿಂದರಾಜು, ಶಾಸಕ ರಿಝ್ವಾನ್ ಅರ್ಷದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News