ಬೆಂಗಳೂರು | ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ
ಬೆಂಗಳೂರು : ದಾವಣಗೆರೆ ಮೂಲದ ಯುವತಿಯೊಬ್ಬಳ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಇಲ್ಲಿನ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನ.2ರಂದು ಸುಬ್ರಮಣ್ಯನಗರದ ಮಿಲ್ಕ್ ಕಾಲೋನಿಯ ಮನೆಯೊಂದರಲ್ಲಿ ಘಟನೆ ನಡೆದಿದ್ದು, ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತಪಟ್ಟ ಯುವತಿಯನ್ನು ಸುಪ್ರಿಯಾ(25) ಎಂದು ಗುರುತಿಸಲಾಗಿದೆ.
ಎಂಬಿಎ ವ್ಯಾಸಂಗ ಮಾಡಿದ್ದ ಸುಪ್ರಿಯಾ, ದ್ವಿಚಕ್ರ ವಾಹನ ರೈಡಿಂಗ್ ತರಬೇತಿ ಸಹ ನೀಡುತ್ತಿದ್ದಳು. ಹಿಂದಿನ ಎರಡು ದಿನಗಳಿಂದ ಆಕೆ ವಾಸವಾಗಿದ್ದ ಕೊಠಡಿ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡು ಮನೆ ಮಾಲಕರು ಬಾಗಿಲು ಬೀಗ ಹೊಡೆದು ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಸುಬ್ರಮಣ್ಯನಗರ ಠಾಣಾ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿರುವುದಾಗಿ ತಿಳಿಸಿದ್ದಾರೆ.