ಶ್ವಾನವನ್ನು ನೆಲಕ್ಕೆ ಬಡಿದು ಹತ್ಯೆ: ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಶ್ವಾನವನ್ನು ನೆಲಕ್ಕೆ ಬಡಿದು ಹತ್ಯೆಗೈದಿದ್ದ ಮಹಿಳೆ
ಬೆಂಗಳೂರು : ಮನೆ ಮಾಲಕರು ಸಾಕಿದ್ದ ಶ್ವಾನವನ್ನು ಮನೆ ಕೆಲಸದ ಮಹಿಳೆ ಅಮಾನವೀಯವಾಗಿ ಹತ್ಯೆಗೈದಿರುವ ಘಟನೆ ನಗರದ ಬಾಗಲೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಕೂಡಲೇ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಜೆನಿ ಲಿಯೋನ್ ಲೋಫೇಝ್ ಆಗ್ರಹಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೂಫಿ ಎಂಬ ಶ್ವಾನವನ್ನು ಮನೆ ಕೆಲಸದಾಕೆ ಪುಷ್ಪಲತಾ ನೆಲಕ್ಕೆ ಬಡಿದು, ಕತ್ತು ಬಿಗಿದು ಹತ್ಯೆಗೈದಿರುವುದು ಲಿಫ್ಟ್ ನಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಂತಹ ಘಟನೆಗಳು ಪ್ರತಿ ದಿನ ರಾಜ್ಯದಾದ್ಯಂತ ನಡೆಯುತ್ತಿವೆ. ಆದರೆ ಅಪರಾಧಿಗಳು ಮಾತ್ರ ರಾಜಾರೋಷವಾಗಿ ಕಾನೂನಿನ ಭಯವಿಲ್ಲದೇ ತಿರುಗಾಡುತ್ತಿದ್ದಾರೆ ಎಂದು ಹೇಳಿದರು.
ಪೊಲೀಸರ ನಿರ್ಲಕ್ಷ್ಯ ಮತ್ತು ವಿಳಂಬವಾದ ತನಿಖೆಗಳಿಂದಲೇ ಇಂತಹ ಘಟನೆಗಳು ಮರುಕಳಿಸುವಂತೆ ಮಾಡುತ್ತಿರುವುದು. ಪ್ರಾಣಿಗಳ ಮೇಲಿನ ಕ್ರೌರ್ಯ ಕೇವಲ ಸಣ್ಣ ಅಪರಾಧವಲ್ಲ, ಅದು ಮಾನಸಿಕ ಅಸ್ವಸ್ಥತೆಯ ಸೂಚನೆ. ಅಮೆರಿಕಾದಂತಹ ರಾಷ್ಟ್ರಗಳಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡುವರ ಮೇಲೆ ಅಧಿಕಾರಿಗಳು ನಿಗಾ ಇಡುತ್ತಾರೆ. ಏಕೆಂದರೆ ಇಂತಹ ಕ್ರೌರ್ಯ ಮಾನವರ ಮೇಲಿನ ಹಿಂಸೆಗೆ ಕಾರಣವಾಗುವ ಸಾಧ್ಯತೆಯೂ ಇರುತ್ತದೆ. ಯಾರಾದರೂ ನಾಯಿಯನ್ನು ಕೊಲ್ಲಬಲ್ಲರೆಂದರೆ, ಅವರು ಮಾನವನನ್ನೂ ಕೊಲ್ಲಬಲ್ಲರು ಎಂದು ಅವರು ತಿಳಿಸಿದರು.
ಬೊಂಗೋ, ಬುಡಿಗೇರಿ ಕ್ರಾಸ್, ಮಾರತ್ತಹಳ್ಳಿ ಪುಪ್ಪಿ ಪ್ರಕರಣ ಸೇರಿದಂತೆ ರಾಜ್ಯದಲ್ಲಿ ಪ್ರಾಣಿಗಳ ಮೇಲಿನ ಹಲ್ಲೆ ಕುರಿತು ದಾಖಲಾಗಿರುವ ಎಲ್ಲ ಪ್ರಕರಣಗಳನ್ನೂ ಸರಕಾರ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಪ್ರಾಣಿಗಳ ಮೇಲಿನ ಹಲ್ಲೆ ಶಿಕ್ಷಾರ್ಹ ಅಪರಾಧವೆಂದು ಸಾರ್ವಜನಿಕರಿಗೆ ಅರಿವಾಗುವಂತೆ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ಯಾರೂ ಇಂತಹ ಕ್ರೌರ್ಯಗಳನ್ನು ಎಸೆಗುವ ಧೈರ್ಯ ಮಾಡದಂತೆ ಮಾಡಬೇಕು ಎಂದು ಜೆನಿ ಲಿಯೋನ್ ಲೋಫೇಝ್ ಒತ್ತಾಯಿಸಿದರು.