×
Ad

ಸುರಂಗ ರಸ್ತೆ ನಿರ್ಮಾಣ ರಾಜ್ಯ ಸರಕಾರದ ಯೋಜನೆ ಅಲ್ಲ : ಎಂ.ಲಕ್ಷ್ಮಣ್

Update: 2025-11-04 20:37 IST

ಬೆಂಗಳೂರು :  ವಿಪಕ್ಷ ನಾಯಕ ಆರ್.ಅಶೋಕ್ ಸುಳ್ಳು ಹೇಳುವುದರಲ್ಲಿ ನಾಲ್ಕು ಪಿಎಚ್‍ಡಿ ಮಾಡಿದ್ದಾರೆ. ಲಾಲ್‍ಬಾಗ್ ಸುರಂಗ ರಸ್ತೆ ಯೋಜನೆ ರಾಜ್ಯ ಸರಕಾರದ್ದಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರೂಪಿಸಿದ ಯೋಜನೆ ಅಲ್ಲ. ಆ ಯೋಜನೆ ಕೇಂದ್ರ ಸರಕಾರದ್ದು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲು ಕೇಂದ್ರ ಸರಕಾರವೇ ಪ್ರಸ್ತಾವನೆ ನೀಡಿದೆ. ಅದನ್ನು ರಾಜ್ಯ ಸರಕಾರ ಸ್ವೀಕಾರ ಮಾಡಿದೆ. 6 ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸುರಂಗ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹೊಸೂರು, ಧರ್ಮಪುರಿ, ಕೃಷ್ಣಗಿರಿಗೆ ಹೋಗುವವರು ನೆಲಮಂಗಲದಲ್ಲಿ ವಾಹನ ಪ್ರವೇಶವಾಗಿ ಬೆಂಗಳೂರಿ ನಗರಕ್ಕೆ ಬರದೇ ಟನಲ್ ಮೂಲಕ ಹೋಗಬಹುದು. ಬಿಜೆಪಿ ನಾಯಕರಿಗೆ ಸುಳ್ಳು ಹೇಳುವುದರಲ್ಲಿ ಮಿತಿ ಇರಬೇಕು. ಒಂದು ಮೆಟ್ರೋ ಟನಲ್‍ಗೆ 500 ಕೋಟಿ ರೂ. ವೆಚ್ಚವಾಗುತ್ತದೆ. ಬೆಂಗಳೂರಿನಲ್ಲಿ ನಿರ್ಮಾಣ ಮಾಡಲು ಯೋಜಿಸಿರುವ ಟನಲ್‍ಗೆ ಒಂದು ಕಿ.ಮೀಗೆ 446.83 ಕೋಟಿ ರೂ.ವೆಚ್ಚವಾಗುತ್ತದೆ. ಆದರೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಕಿ.ಮೀಗೆ 1,285ಕೋಟಿ ರೂ. ವೆಚ್ಚವಾಗುತ್ತದೆ ಎಂದು ಹೇಳುತ್ತಾರೆ. ಅವರಿಗೆ ಮಾನ ಮರ್ಯಾದೆ ಇಲ್ಲವಾ? ಎಂದು ಪ್ರಶ್ನಿಸಿದರು.

ಆರ್.ಅಶೋಕ್ ಅವರು ದಾಖಲೆ ಇಟ್ಟುಕೊಂಡು ಮಾತನಾಡಬೇಕು. ಸುರಂಗ ರಸ್ತೆ ನಿರ್ಮಾಣಕ್ಕೆ 120 ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಕೂಡ ಹೇಳಿದ್ದರು. ಆದರೆ ರಾಜ್ಯದಲ್ಲಿ ಇರುವುದೇ 38 ಇಲಾಖೆಗಳು. 120 ಇಲಾಖೆಗಳು ಎಲ್ಲಿ ಬರುತ್ತವೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಕಾಂಗ್ರೆಸ್ ಮುಖಂಡರಾದ ಎ.ಆನಂದ್, ಸುಧಾಕರ್ ರಾವ್, ಪ್ರಕಾಶ್, ಕುಶಾಲ್ ಹರುವೇಗೌಡ, ಚಂದ್ರಶೇಖರ, ಸುಂಕದಕಟ್ಟೆ ನವೀನ್, ಉಮೇಶ್, ಪುಟ್ಟರಾಜು ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News