×
Ad

ಸಂಡೂರಿನಲ್ಲಿ ನೂತನ ಕೌಶಲ್ಯ ವಿವಿ ಸ್ಥಾಪನೆ : ಮುಖ್ಯಮಂತ್ರಿ ಸಿದ್ದರಾಮಯ್ಯ

‘ಬೆಂಗಳೂರು ಕೌಶಲ್ಯ ಶೃಂಗಸಭೆ’

Update: 2025-11-05 00:11 IST

ಬೆಂಗಳೂರು : ಕರ್ನಾಟಕವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವುದು ನಮ್ಮ ಗುರಿ ಆಗಿದ್ದು, ಈ ನಿಟ್ಟಿನಲ್ಲಿ ನೂತನ ಕೌಶಲ್ಯ ವಿಶ್ವವಿದ್ಯಾನಿಲಯವನ್ನು ಸಂಡೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿರುವ ಮೂರು ದಿನಗಳ ‘ಬೆಂಗಳೂರು ಕೌಶಲ್ಯ ಶೃಂಗಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು ಕೌಶಲ್ಯ ಶೃಂಗಸಭೆಯೂ ಕರ್ನಾಟಕದ ಕೌಶಲ್ಯ ಪಯಣದಲ್ಲಿ ಒಂದು ಮೈಲಿಗಲ್ಲು. ಕರ್ನಾಟಕವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವುದು ನಮ್ಮ ಗುರಿ. ಇಎಸ್ ಡಿಎಂಎಐ, ಎಂಎಲ್ ಏರೋಸ್ಪೇಸ್, ಹಸಿರು ಇಂಧನ, ಒಳಗೊಳ್ಳುವಿಕೆ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಕ್ಕೆ ತಯಾರಾಗಿರುವ ಕಾರ್ಮಿಕಪಡೆಯನ್ನು ಸಿದ್ಧಮಾಡುವತ್ತ ಗಮನವನ್ನು ಕೇಂದ್ರೀಕೃತಗೊಳಿಸಿದೆ ಎಂದರು.

ಶೃಂಗಸಭೆ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಹಿಸಿದ್ದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾರಿಷಸ್ ರಾಷ್ಟ್ರದ ಕೈಗಾರಿಕಾ ಮತ್ತು ಕಾರ್ಮಿಕ ಸಚಿವ ಮುಹಮ್ಮದ್ ರೆಝ್ಹಾ ಖಾಸ್ಸಂ ಉತೀಮ್, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣ ಬಸಪ್ಪ ದರ್ಶನಾಪೂರ್, ಕನಾಟಕ ಕೌಶಲ್ಯಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಇ.ವಿ.ರಮಣ ರೆಡ್ಡಿ, ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಿವಕಾಂತಮ್ಮ ನಾಯಕ್ ಪಾಲ್ಗೊಂಡಿದ್ದರು.

ಆಸನ ವ್ಯವಸ್ಥೆಯಿಲ್ಲದೆ ಉದ್ಯಮಿಗಳ ಪರದಾಟ :

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‌ನಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿದ್ದ ‘ಬೆಂಗಳೂರು ಕೌಶಲ್ಯ ಶೃಂಗಸಭೆ’ಯಲ್ಲಿ ಸೂಕ್ತ ಆಸನ ವ್ಯವಸ್ಥೆ ಇಲ್ಲದೆ ಉದ್ಯಮಿಗಳು ಪರದಾಡುವಂತಾಯಿತು. ಅದಲ್ಲದೆ, ನೋಂದಣಿ ಸಮಸ್ಯೆ, ಭದ್ರತೆ ಸೇರಿದಂತೆ ಅವ್ಯವಸ್ಥೆಯ ಆಗರವೇ ಕಂಡುಬಂದಿದ್ದು, ಇದರ ಜವಾಬ್ದಾರಿ ಹೊತ್ತಿರುವ ಖಾಸಗಿ ಸಂಸ್ಥೆ ‘ಟ್ರೆಸ್ಕಾನ್’ನ ನಿರ್ವಹಣೆ ಕೊರತೆ ಎದ್ದು ಕಂಡಿದೆ.

ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವಿದೇಶಿ ಉದ್ಯಮಿಗಳು, ವಿವಿಧ ಕಂಪೆನಿಗಳ ಪ್ರಮುಖರು, ಸಾಮಾಜಿಕ ಜಾಲತಾಣಗಳ ಇನ್ಫ್ಲುಯೆನ್ಸರ್‌ಗಳು, ಪತ್ರಕರ್ತರು ಒಳಗೊಂಡತೆ ಹಲವು ಮಂದಿ ನೋಂದಣಿಗಾಗಿ ಕಾಯುತ್ತಾ ನಿಲ್ಲಬೇಕಾಯಿತು. ಶೃಂಗಸಭೆಯ ಉದ್ಘಾಟನಾ ಕಾರ್ಯಕ್ರಮವನ್ನು ದಿ ಲಲಿತ್ ಅಶೋಕ್ ಹೋಟೆಲ್‌ನ ಪಾರ್ಕಿಂಗ್ ಆವರಣದ ಬಳಿಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಆದರೆ, ಇಲ್ಲಿ ಗಣ್ಯರು, ಉದ್ಯಮಿಗಳು, ಪತ್ರಕರ್ತರು ಸೂಕ್ತ ಆಸನ ಇಲ್ಲದೇ ಗಂಟೆಗಟ್ಟಲೆ ನಿಂತು ಉದ್ಘಾಟನಾ ಕಾರ್ಯಕ್ರಮ ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News