ಹೊರ ರಾಜ್ಯ-ದೇಶಗಳಿಂದ ಬಂದವರಿಗೆ ಕನ್ನಡ ಕಲಿಸಲು ಕ್ರಮ : ರಾಜೀವ್ ಗಾಂಧಿ ವಿವಿ ಕುಲಪತಿ ಡಾ.ಭಗವಾನ್ ಬಿ.ಸಿ.
‘ಕನ್ನಡ ರಾಜ್ಯೋತ್ಸವ 2025’ ಕಾರ್ಯಕ್ರಮ
ಬೆಂಗಳೂರು : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕನ್ನಡಾಭಿಮಾನವನ್ನು ಕೇವಲ ಮಾತಿನಲ್ಲಿ ಮಾತ್ರವಲ್ಲ, ಆಚರಣೆಯಲ್ಲಿಯೂ ಪ್ರದರ್ಶಿಸುತ್ತಿದೆ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್ ಬಿ.ಸಿ. ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಕನ್ನಡ ರಾಜ್ಯೋತ್ಸವ – 2025’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಬಹುದೊಡ್ಡ ಆರೋಗ್ಯ ವಿಶ್ವವಿದ್ಯಾಲಯ ಎನ್ನುವ ಹೆಗ್ಗಳಿಕೆ ಗಳಿಸಿರುವ ನಾವು, ಸಾಮಾಜಿಕ ಹಾಗೂ ಸಮುದಾಯ ಆರೋಗ್ಯ ರಕ್ಷಣೆಯ ಜೊತೆಗೆ, ಕನ್ನಡ ಭಾಷೆ, ನೆಲ, ಜಲ ಮತ್ತು ಪರಂಪರೆಯ ಬೇರನ್ನು ಗಟ್ಟಿಗೊಳಿಸುವ ಕೆಲಸದಲ್ಲೂ ಹಿಂದೆ ಬಿದ್ದಿಲ್ಲ ಎಂದರು.
ಕನ್ನಡ ಭಾಷೆಯ ಪ್ರಚಾರ–ಪ್ರಸಾರ ನಮ್ಮ ವಿಶ್ವವಿದ್ಯಾಲಯದ ಸಾಂಸ್ಕೃತಿಕ ಹೊಣೆಗಾರಿಕೆಯೂ, ನಮ್ಮ ಬೌದ್ಧಿಕ ಕರ್ತವ್ಯವೂ ಆಗಿದೆ. ಕನ್ನಡವನ್ನು ಕಟ್ಟಿ ಬೆಳೆಸುವ ನಮ್ಮ ಬದ್ಧತೆಯ ಭಾಗವಾಗಿ ವಿಶ್ವವಿದ್ಯಾಲಯದ ಬಹುತೇಕ ಆಡಳಿತಾತ್ಮಕ ವ್ಯವಹಾರಗಳನ್ನು ಸಹ ಕನ್ನಡದಲ್ಲಿಯೇ ನಡೆಸಲಾಗುತ್ತಿದೆ. ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸಲು ಮತ್ತು ವೈದ್ಯಕೀಯ ಕನ್ನಡ ಸಾಹಿತ್ಯವನ್ನು ವಿಸ್ತರಿಸಲು, ವಿಶ್ವವಿದ್ಯಾಲಯದ ಪ್ರಸಾರಂಗದ ಮೂಲಕ ಅನೇಕ ಅಮೂಲ್ಯ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದರು.
ಕನ್ನಡ ನಮ್ಮ ವ್ಯವಹಾರ ಭಾಷೆಯಾಗಬೇಕು ಎಂಬ ಸಂಕಲ್ಪದ ಫಲವಾಗಿ ವಿಶ್ವವಿದ್ಯಾಲಯದ ಬಹುತೇಕ ಕಾರ್ಯಕ್ರಮಗಳು ಕನ್ನಡದಲ್ಲಿಯೇ ನಡೆಯುತ್ತವೆ. ಪ್ರತಿ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಯನ್ನು, ಕಾರ್ಯಕ್ರಮದ ಅಂತ್ಯದಲ್ಲಿ ರಾಷ್ಟ್ರಗೀತೆಯನ್ನೂ ಕಡ್ಡಾಯಗೊಳಿಸಿದ್ದೇವೆ. ಇದರ ಜೊತೆಗೆ, ನಮ್ಮ ವಿಶ್ವವಿದ್ಯಾಲಯದ ಗುರುತಿನ ಚಿಹ್ನೆಯಾಗಿ ಮತ್ತು ಭಾಷಾ ಅಸ್ಮಿತೆಯ ಸಂಕೇತವಾಗಿ, ನಮ್ಮದೇ ಆದ ಕನ್ನಡ ಧ್ಯೇಯ ಗೀತೆಯನ್ನು ಪರಿಚಯಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ನಮ್ಮ ವಿಶ್ವವಿದ್ಯಾಲಯದಲ್ಲಿ ಅನೇಕ ವಿದ್ಯಾರ್ಥಿಗಳು ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಬಂದವರಾಗಿದ್ದಾರೆ. ಅವರಿಗೂ ಕನ್ನಡ ಕಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸ್ಯಲೇಖಕ ಎಂ.ಎಸ್. ನರಸಿಂಹಮೂರ್ತಿ ಮಾತನಾಡಿ, ಕನ್ನಡ ಬಹಳ ದೊಡ್ಡ ಭಾಷೆ. ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದೆ, ಪರಂಪರೆ ಇದೆ. ಇಂಗ್ಲಿಷ್ ನ ಮಹಾಸಾಹಿತಿಗಳು ಹುಟ್ಟುವ ಸಮಯಕ್ಕೆ ಕನ್ನಡದ ಪುರಂದರದಾಸರು, ರನ್ನ-ಪೊನ್ನರು ಕನ್ನಡದಲ್ಲಿ ಮುಂದಿನ 12 ಜನುಮಗಳಿಗೆ ಆಗುವಷ್ಟು ಸಮೃದ್ಧ ಸಾಹಿತ್ಯವನ್ನು ರಚಿಸಿ ಹೋಗಿದ್ದರು. ಅನಂತರ ಬಂದ ಇಂಗ್ಲಿಷ್ ಭಾಷೆಗೆ ನಾವೆಲ್ಲಾ ಸಮ್ಮೋಹನಗೊಂಡ ಬಗೆ ಬೇಸರ ಹುಟ್ಟಿಸುವಂತಿದೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ಮೂಡಿ ಬಂದ ಬಂಜಾರಾ ನೃತ್ಯ, ಯಕ್ಷ ಪ್ರಯೋಗ-ಶ್ರೀರಾಮ ಪಟ್ಟಾಭಿಶೇಕ ಮುಂತಾದ ಕಾರ್ಯಕ್ರಮಗಳು ಕಣ್ಮನ ಸೆಳೆದವು.
ಕುಲಸಚಿವರಾದ ಅರ್ಜುನ್ ಒಡೆಯರ್, ಮೌಲ್ಯಮಾಪನ ಕುಲಸಚಿವರಾದ ಡಾ. ರಿಯಾಜ್ ಬಾಷಾ ಎಸ್., ಹಣಕಾಸು ಅಧಿಕಾರಿ ಬಿ.ಕೆ. ಗಂಗಾಧರ ಮಾತನಾಡಿದರು.
"ನಾನು ಕಾಲೇಜಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದೆ. ಕನ್ನಡದಲ್ಲಿ 125ಕ್ಕೆ 123ಅಂಕ ಗಳಿಸಿದ್ದು ನನ್ನ ಕನ್ನಡ ಪ್ರೀತಿಗೆ ಸಾಕ್ಷಿ. ಮುಂದೆ ವೈದ್ಯನಾಗಬೇಕೆನ್ನುವ ಮಹದಾಸೆ ಇತ್ತು. ನನ್ನ ಆಸೆ ಕೈಗೂಡಿದ್ದರೆ ಇಂದು ನಾನೂ ಕೂಡ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಭಾಗವಾಗಿರುತ್ತಿದ್ದೆ. ಆದರೆ ಸಿಇಟಿಯಲ್ಲಿ ಕಡಿಮೆ ರ್ಯಾಂಕಿಂಗ್ ಬಂದಿದ್ದಕ್ಕೆ, ಹಣ ಕೊಟ್ಟು ಓದುವ ಅವಕಾಶ ಇಲ್ಲದ್ದಕ್ಕೆ ಎಂಜಿನಿಯರಿಂಗ್ ಓದಿ ನಟನಾದೆ"
ಡಾಲಿ ಧನಂಜಯ, ನಟ