‘ರಾಜ್ಯದಲ್ಲಿ ಹೂಡಿಕೆ’ ಭಾರತ್ ಫೋರ್ಜ್ ಜತೆ ಸಚಿವ ಎಂ.ಬಿ.ಪಾಟೀಲ್ ಮಾತುಕತೆ
ಬೆಂಗಳೂರು : ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಸಂಬಂಧಿಸಿದಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಭಾರತ್ ಫೋರ್ಜ್ ಕಂಪನಿಯ ಉಪಾಧ್ಯಕ್ಷ ಮತ್ತು ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಕಲ್ಯಾಣಿ ಅವರನ್ನು ಮಹಾರಾಷ್ಟ್ರದ ಪುಣೆಯಲ್ಲಿ ಭೇಟಿಯಾಗಿ, ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಅಮಿತ್ ಕಲ್ಯಾಣಿ ಅವರು, ತಮ್ಮ ಕಂಪನಿಯ ಸದ್ಯದ ಕಾರ್ಯ ಚಟುವಟಿಕೆಗಳು, ಮುಂದಿನ ಕಾರ್ಯತಂತ್ರಗಳು, ಉತ್ಪಾದನಾ ಸಾಮಥ್ರ್ಯ ಹೆಚ್ಚಳ ಮತ್ತು ಘಟಕಗಳ ವಿಸ್ತರಣೆ, ಅಮೆರಿಕನ್ ಆ್ಯಕ್ಸೆಲ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಸ್ವಾಧೀನ ಮುಂತಾದವುಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಭಾರತ್ ಫೋರ್ಜ್ ಕಂಪನಿಯು ಫೋಜಿರ್ಂಗ್ ಮತ್ತು ಪ್ರಿಸಿಷನ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಪಂಚದ ಬೃಹತ್ ಕಂಪನಿಗಳಲ್ಲಿ ಒಂದಾಗಿದೆ.
ಸಚಿವರು, ಕಲ್ಯಾಣಿ ಅವರಿಗೆ ರಾಜ್ಯದ ಹೊಸ ಕೈಗಾರಿಕಾ ನೀತಿ, ಇಲ್ಲಿನ ಉದ್ಯಮ ಪರಿಸರ, ಪ್ರೋತ್ಸಾಹನಾ ಭತ್ತೆಗಳು ಮುಂತಾದವುಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿ, ರಾಜ್ಯದಲ್ಲಿ ಹೂಡಿಕೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಮಿತ್ ಕಲ್ಯಾಣಿ ಅವರು ಹೆಸರಾಂತ ಉದ್ಯಮಿಯಾಗಿದ್ದ ಬಾಬಾ ಕಲ್ಯಾಣಿ ಅವರ ಪುತ್ರರಾಗಿದ್ದಾರೆ.
ರಾಜ್ಯ ಸರಕಾರದ ಉನ್ನತ ಮಟ್ಟದ ನಿಯೋಗದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ ಮುಂತಾದವರಿದ್ದರು.