ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ ಆರೋಪ; ಸರ್ಕಾರಕ್ಕೆ ತುರ್ತು ನೋಟಿಸ್
ಬೆಂಗಳೂರು: ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ 20 ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತುರ್ತು ನೋಟಿಸ್ ಜಾರಿಗೊಳಿಸಿದೆ.
ಅಂಗನಾವಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2025ರ ಆಗಸ್ಟ್ 2ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ರಾಯಚೂರಿನ ಕವಿತಾಳದ ರಾಜೇಶ್ವರಿ ಎಂಬುವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೆಪಿಎಸ್‌ಸಿ, ರಾಯಚೂರು ಜಿಲ್ಲಾಧಿಕಾರಿ ಹಾಗೂ ನೇಮಕಗೊಂಡಿರುವ ವಿವಿಧ ಜಿಲ್ಲೆಗಳ 20 ಕಾರ್ಯಕರ್ತೆಯರು ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಇದಕ್ಕೂ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ರಾಯಚೂರು ಜಿಲ್ಲೆಯನ್ನು ಆಶೋತ್ತರ ಜಿಲ್ಲೆ ಎಂದು ಪರಿಗಣಿಸಿದ್ದ ಕೇಂದ್ರ ಸರ್ಕಾರ 2018ರ ಮಾರ್ಚ್ 14ರಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ನೀಡಿ ಆದೇಶ ಹೊರಡಿಸಿದೆ. ಅದರಂತೆ, ಜಿಲ್ಲಾಧಿಕಾರಿಗಳು ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿರು ಅಥವಾ ಮೇಲ್ವಿಚಾರಕರನ್ನು ನೇಮಕ ಮಾಡಬೇಕಾಗಿತ್ತು. ಆದರೆ, ಆ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಮನವಿ ಏನು?
ಕೆಪಿಎಸ್‌ಸಿ ಮೂಲಕ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿ ಸರ್ಕಾರ ಕಾನೂನು ಉಲ್ಲಂಘಿಸಿರುವುದರಿಂದ ನೇಮಕಾತಿ ಪಟ್ಟಿಯನ್ನೇ ರದ್ದು ಮಾಡಬೇಕು. ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸಲು ಕೋರಿ ಅರ್ಜಿದಾರರು ನೀಡಿರುವ ಮನವಿ ಪರಿಗಣಿಸುವಂತೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.