×
Ad

ಹೆಣ್ಣಾನೆ ʼಸುಭದ್ರೆʼ ಮಾಲೀಕತ್ವ ವಿವಾದ; ಆಕ್ಷೇಪಣೆ ಸಲ್ಲಿಸಲು ಶ್ರೀಕೃಷ್ಣ ಮಠಕ್ಕೆ ಕೊನೇ ಅವಕಾಶ ನೀಡಿದ ಹೈಕೋರ್ಟ್

Update: 2025-11-06 00:24 IST

ಬೆಂಗಳೂರು: 'ಸುಭದ್ರೆ' ಹೆಸರಿನ ಹೆಣ್ಣಾನೆಯ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ದಾವಣಗೆರೆ ಜಿಲ್ಲೆ ಹೊನ್ನಾಳ್ಳಿಯ ಚನ್ನಬಸಪ್ಪಸ್ವಾಮಿ ಹಿರೇಕಲ್ಮಠ ಸಂಸ್ಥಾನ ಹಾಗೂ ಉಡುಪಿ ಶ್ರೀಕೃಷ್ಣ ಮಠದ ನಡುವಿನ ವಿವಾದ ಕುರಿತ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಶ್ರೀಕೃಷ್ಣ ಮಠಕ್ಕೆ ಹೈಕೋರ್ಟ್ ಕೊನೆಯ ಅವಕಾಶ ನೀಡಿದೆ.

ಹೆಣ್ಣಾನೆ ಸುಭದ್ರೆಯನ್ನು ಶ್ರೀಕೃಷ್ಣಮಠಕ್ಕೆ ಸ್ಥಳಾಂತರಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) 2025ರ ಸೆಪ್ಟಂಬರ್ 10ಕ್ಕೆ ಹೊರಡಿಸಿರುವ ಆದೇಶ ಪ್ರಶ್ನಿಸಿ ಹಿರೇಕಲ್ಮಠ ಸಂಸ್ಥಾನದ ಪ್ರತಿನಿಧಿ ಎಂ.ಪಿ.ಎಂ. ಚನ್ನಬಸಯ್ಯ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹೆಣ್ಣಾನೆ ಸುಭದ್ರೆಯ ಆರೈಕೈಯನ್ನು ಸುದೀರ್ಘ 26 ವರ್ಷಗಳ ಕಾಲ ಮಾಡಲಾಗಿದೆ. ಗಾಯಗಳು ಮಾಸದ ಕಾರಣ ಸುಭದ್ರೆಯನ್ನು ಮೊದಲು ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲಿಂದ ಹಿರೇಕಲ್ಮಠ ಸಂಸ್ಥಾನದ ಸುಪರ್ದಿಗೆ ನೀಡಲಾಯಿತು. ಈ ಮಧ್ಯೆ, ಸುಭದ್ರೆಯನ್ನು ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸುವಂತೆ ಪಿಸಿಸಿಎಫ್ ಆದೇಶ ಮಾಡಿದ್ದಾರೆ. ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶದಂತೆ 6 ಪಶು ವೈದ್ಯ ತಜ್ಞರ ತಂಡ ಸುಭದ್ರೆಯ ಆರೋಗ್ಯ ತಪಾಸಣೆ ನಡೆಸಿದ್ದು, ಹೆಣ್ಣಾನೆ ಆರೋಗ್ಯವಾಗಿದೆಯೆಂದು ವರದಿಯಲ್ಲಿ ಹೇಳಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಶ್ರೀಕೃಷ್ಣ ಮಠದ ಪರ ವಕೀಲರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು ಕೋರಿದ ಹಿನ್ನೆಯಲ್ಲಿ, ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ ನೀಡುತ್ತಿರುವುದಾಗಿ ತಿಳಿಸಿದ ನ್ಯಾಯಪೀಠ, ನವೆಂಬರ್ 27ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.

ಇದೇ ವೇಳೆ, ಸುಭದ್ರೆಯನ್ನು ಆತುರವಾಗಿ ಸ್ಥಳಾಂತರ ಮಾಡದಂತೆ ಸೆಪ್ಟೆಂಬರ್ 23ರಂದು ನೀಡಿದ್ದ ಮಧ್ಯಂತರ ಆದೇಶವನ್ನು ಅರ್ಜಿಯ ಮುಂದಿನ ವಿಚಾರಣೆಯ ವರೆಗೆ ವಿಸ್ತರಿಸಿತು.

ಪ್ರಕರಣವೇನು?

ಹೆಣ್ಣಾನೆ ಸುಭದ್ರೆಯನ್ನು 1993ರಿಂದ 2019ರವರೆಗೆ ಉಡುಪಿ ಶ್ರೀಕೃಷ್ಣಮಠ ಆರೈಕೆ ಮಾಡುತ್ತಿತ್ತು. ನಂತರ ಅದನ್ನು ಹಿರೇಕಲ್ಮಠ ಸಂಸ್ಥಾನಕ್ಕೆ ಸ್ಥಳಾಂತರಿಸಲಾಗಿತ್ತು. ಅಲ್ಲದೇ ಹಿರೇಕಲ್ಮಠಕ್ಕೆ ಸುಭದ್ರೆಯ ಮಾಲೀಕತ್ವ ಪ್ರಮಾಣಪತ್ರ ಸಹ ನೀಡಲಾಗಿತ್ತು. ಆದರೆ, ಸುಭದ್ರೆಯನ್ನು ಉಡುಪಿ ಶ್ರೀಕೃಷ್ಣ ಮಠಕ್ಕೆ ಹಸ್ತಾಂತರಿಸಬೇಕು ಎಂದು 2025ರ ಸೆಪ್ಟೆಂಬರ್ 10ರಂದು ಆದೇಶ ಹೊರಡಿಸಿದ್ದ ಪಿಸಿಸಿಎಫ್, ಹಿರೇಕಲ್ಮಠಕ್ಕೆ ನೀಡಲಾಗಿದ್ದ ಸುಭದ್ರೆಯ ಮಾಲಿಕತ್ವದ ಪ್ರಮಾಣಪತ್ರವನ್ನೂ ರದ್ದುಪಡಿಸಿದ್ದರು. ಇದನ್ನು ಪ್ರಶ್ನಿಸಿ ಹಿರೇಕಲ್ಮಠ ಸಂಸ್ಥಾನ ಹೈಕೋರ್ಟ್ ಮೆಟ್ಟಿಲೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News