×
Ad

ಮಾರಾಟ ಹೆಸರಿನಲ್ಲಿ ವಂಚನೆ: ನಿವೇಶನ ಮಾಲಕನಿಗೆ 2 ವರ್ಷ ಶಿಕ್ಷೆ ವಿಧಿಸಿ ತೀರ್ಪು

Update: 2025-11-03 00:32 IST

ಸಾಂದರ್ಭಿಕ ಚಿತ್ರ 

ಬೆಂಗಳೂರು : ನಿವೇಶನ ಮಾರಾಟ ಮಾಡುವುದಾಗಿ ನಂಬಿಸಿ ಹಣ ಪಡೆದುಕೊಂಡು ಆನಂತರ ಹಣ ನೀಡದೆ, ಜಾಗ ನೋಂದಣಿ ಮಾಡಿಕೊಡದೆ ವಂಚನೆ ಮಾಡಿದ್ದ ಪ್ರಕರಣಯೊಂದರಲ್ಲಿ ಬೆಂಗಳೂರು ನಗರದ 3ನೆ ಎಸಿಜೆಎಂ ನ್ಯಾಯಾಲಯ, ಮಾಲಕನಿಗೆ 2 ವರ್ಷ ಸಾದಾ ಕಾರಾಗೃಹ ಶಿಕ್ಷೆ ವಿಧಿಸುವ ಜತೆಗೆ, 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

ಬೆಂಗಳೂರಿನ ವಿವೇಕನಗರ ಠಾಣಾ ಪೊಲೀಸರು ಈ ಪ್ರಕರಣ ಭೇದಿಸಿದ್ದು, ಬಿದರಹಳ್ಳಿ ಹೋಬಳಿಯ ಆವಲಹಳ್ಳಿ ಗ್ರಾಮದ ಗುರುಸ್ವಾಮಿ ಎಂಬಾತನಿಗೆ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 10,000 ರೂ., ದಂಡ ವಿಧಿಸಿ ನ್ಯಾಯಾಧೀಶ ಎಸ್.ಸಿದ್ದರಾಮ ಅವರು ತೀರ್ಪು ಪ್ರಕಟಿಸಿದ್ದಾರೆ.

ಆರೋಪಿ ಗುರುಸ್ವಾಮಿ ವಿರುದ್ಧ ನಿವೇಶನ, ಮನೆ ಮಾರಾಟ ಹೆಸರಿನಲ್ಲಿ ಸರಣಿ ವಂಚನೆ ಮಾಡುತ್ತಿದ್ದ ಗಂಭೀರ ಆರೋಪಗಳು ಕೇಳಿಬರುತ್ತಿದ್ದವು. ಈ ಸಂಬಂಧ 2015ರಲ್ಲಿ ಆತ 30*40ರಷ್ಟು ವಿಸ್ತೀರ್ಣದ ನಿವೇಶನವೊಂದನ್ನು 22.86 ಲಕ್ಷ ರೂ.ಗಳಿಗೆ ಮಾರಾಟ ಮಾಡುವುದಾಗಿ ವ್ಯಕ್ತಿಯೊಬ್ಬರನ್ನು ನಂಬಿಸಿದ್ದ.

ಅದರಂತೆ ಮುಂಗಡವಾಗಿ 20 ಲಕ್ಷ ರೂಪಾಯಿ ಪಡೆದಿದ್ದು ಮಾತ್ರವಲ್ಲದೆ, ಶಿವಾಜಿನಗರ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ಮಾರಾಟ ಕರಾರು ಮಾಡಿಸಿ ಸಹ ನೀಡಿದ್ದ. ಆದರೆ ಆರೋಪಿ ಗುರುಸ್ವಾಮಿ, ಖರೀದಿ ಮಾಡಿದ ವ್ಯಕ್ತಿಗೆ ನಿವೇಶನ ನೀಡದೆ ಹಣವನ್ನು ವಾಪಸು ಕೊಡದೇ ಬೆದರಿಕೆ ಹಾಕಿದ್ದ ಎಂದು ಆರೋಪಿಸಿ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಈ ಸಂಬಂಧ ಠಾಣೆಯ ಇನ್ಸ್‍ಪೆಕ್ಟರ್ ಎಚ್.ಆರ್.ಶಿವಕುಮಾರ್, ಪಿಎಸ್ಸೈ ಎಚ್.ಎಸ್.ಕೃಷ್ಣ, ಕಾನ್ಸ್‍ಟೇಬಲ್ ಚಂದ್ರಶೇಖರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಬೆಂಗಳೂರು ನಗರದ 3ನೆ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಎಸ್.ಸಿದ್ದರಾಮ ಅವರು, ಆರೋಪಿ ಗುರುಸ್ವಾಮಿಗೆ ಐಪಿಸಿ ಕಲಂ 406, 420 ಅಡಿ 2 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂ., ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಬಿ.ಸಿ.ರಾಜೇಶ್ ಪ್ರಕರಣದ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News