ಲೈಂಗಿಕ ದೌರ್ಜನ್ಯ ಎಸಗಿದವರೆಲ್ಲಾ ‘ಮೋದಿ ಪರಿವಾರದವರು’ : ಅಲಕಾ ಲಂಬಾ
ಬೆಂಗಳೂರು: ಮಹಿಳೆಯರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವರೆಲ್ಲಾ ಮೋದಿ ಪರಿವಾರದವರು ಎಂದು ಎಐಸಿಸಿ ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷೆ ಅಲಕಾ ಲಂಬಾ ಅವರು ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ನಗರದ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ, ಬಿಜೆಪಿಯ ಕುಲ್‍ದೀಪ್ ಸಿಂಗ್, ಉತ್ತರ ಪ್ರದೇಶದ ರಾಮ್ ದುಲ್ಹಾರೆ, ಬ್ರಿಜ್‍ಭೂಷಣ್ ಸಿಂಗ್, ಹರಿಯಾಣದ ಸಚಿವ ಸಂದೀಪ್ ಸಿಂಗ್ ಇವರೆಲ್ಲಾ ಮಹಿಳೆಯರು, ಬಾಲಕಿಯರ ಮೇಲೆ ದೌರ್ಜನ್ಯ ಎಸಗಿದವರು. ಇವರೇ ನಿಜವಾದ ಮೋದಿ ಪರಿವಾರದವರು. ಇದೇ ಮೋದಿ ಅವರ ಪರಿವಾರ ವಾದದ ಅರ್ಥ ಎಂದರು.
ಹಾಸನದ ಸಂಸದ, ಎನ್‍ಡಿಎ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು ಇದುವರೆಗೂ ನಡೆದ ಎಲ್ಲಾ ಮಹಿಳಾ ದೌರ್ಜನ್ಯಗಳ ದಾಖಲೆಗಳನ್ನು ಮುರಿದು ಹಾಕಿದ್ದಾರೆ. ದೇಶದ ಪ್ರಧಾನಿ ಮಂತ್ರಿ ತಮ್ಮ ಪ್ರತಿ ಭಾಷಣದಲ್ಲಿ ಕುಟುಂಬ ರಾಜಕಾರಣ ಹಾಗೂ ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಹೇಳುತ್ತಲೇ ಇರುತ್ತಾರೆ. ಅವರ ಮಾತಿಗೆ ಏನಾದರೂ ಅರ್ಥವಿದೆಯೇ ಎಂದು ಅವರು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ 2ಸಾವಿರಕ್ಕೂ ಹೆಚ್ಚು ಬಾರಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ನಮ್ಮ ಹೆಣ್ಣು ಮಕ್ಕಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮೋದಿಯವರು ಮಾತೆತ್ತಿದರೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಜೊತೆ ನಿಂತು ಪ್ರಧಾನಿಗಳು ಫೋಟೋಗೆ ನಿಲ್ಲುತ್ತಾರೆ. ಆದರೆ ಭಾಷಣದಲ್ಲಿ ಮಾತ್ರ ಕುಟುಂಬ ರಾಜಕಾರಣ ಮತ್ತು ಬೇಟಿ ಬಚಾವೋ ಬಗ್ಗೆ ಮಾತನಾಡುತ್ತಾರೆ ಎಂದು ಅಲಕಾ ಲಂಬಾ ದೂರಿದರು.
ಅಧಿಕಾರದ ಮಧದಿಂದ ಈ ಕೃತ್ಯಗಳು ನಡೆದಿದೆ. ತನ್ನ ಅಧಿಕಾರವನ್ನು ಬಳಸಿಕೊಂಡು ಬಡ, ಅಮಾಯಕ ಹೆಣ್ಣು ಮಕ್ಕಳ ಮಾನಹಾನಿಯಾಗಿದೆ. ಪ್ರಧಾನ ಮಂತ್ರಿಗಳೇ ಜೊತೆಗಿರುವಾಗ ಆತ ಏಕೆ ಭಯಪಡಬೇಕು. ಅದಕ್ಕೆ ಸಾವಿರಾರು ವಿಡಿಯೋಗಳನ್ನು ಮಾಡಿದ್ದಾನೆ. ಕಾನೂನಿನ ಭಯವಿಲ್ಲದೆ ಕೃತ್ಯ ಎಸಗಿದ್ದಾನೆ. ಶೋಷಣೆಗೆ ಒಳಗಾದ ಹೆಣ್ಣುಮಕ್ಕಳ ಗುರುತನ್ನು ಅದಷ್ಟು ಗುಪ್ತವಾಗಿ ಇರಿಸಬೇಕೆಂದು ಎಸ್‍ಐಟಿಯಲ್ಲಿ ಮನವಿ ಮಾಡುತ್ತೇನೆ. ಅನ್ಯಾಯಕ್ಕೆ ಒಳಗಾದ ಎಲ್ಲಾ ಮಹಿಳೆಯರ ಪರವಾಗಿ ನಾವು ಇರುತ್ತೇವೆ. ನೀವು ಮುಂದೆ ಬಂದು ಆರೋಪಿ ತಪ್ಪಿಸಿಕೊಳ್ಳದಂತೆ ದೂರು ನೀಡಬೇಕು. ಪೊಲೀಸ್ ಠಾಣೆಗೆ ಬರಲು ಹೆದರಿಕೆಯಾದರೆ ಆನ್‍ಲೈನ್ ಮೂಲಕ ದೂರು ದಾಖಲಿಸಿ ಎಂದು ಅಲಕಾ ಲಂಬಾ ಕರೆ ನೀಡಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯಾರೆಡ್ಡಿ ಮಾತನಾಡಿ, ಕರ್ನಾಟಕದ ಇತಿಹಾಸದಲ್ಲಿ ಇಂತಹ ಹೀನ ಘಟನೆ ನಡೆಯುತ್ತದೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ದೇಶದ ಶೇ.50ರಷ್ಟು ಜನಸಂಖ್ಯೆ ನಾವಿದ್ದೇವೆ. ನಮ್ಮನ್ನು ದೇವರ ಹೆಸರಿನಲ್ಲಿ ಪೂಜೆ ಮಾಡುತ್ತಾರೆ. ಹೆಣ್ಣು ದೇವರುಗಳಿಗೆ ಪೂಜೆ ಮಾಡುವುದು ಬೇಡ. ಗೌರವ ರಕ್ಷಣೆ ಕೊಟ್ಟರೇ ಸಾಕು ಎಂದರು.
ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರ ಈ ಹೀನ ಕೃತ್ಯಗಳ ಬಗ್ಗೆ ಬಿಜೆಪಿಯ ಅಧ್ಯಕ್ಷ ವಿಜಯೇಂದ್ರ, ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೆ ಈ ವಿಚಾರಗಳು ಗೊತಿದ್ದರೂ ಟಿಕೆಟ್ ನೀಡಿದ್ದು ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ನಾರಿಶಕ್ತಿ, ಮಹಿಳಾ ಸಮಾನತೆ ಎಂದು ಹೇಳುವ ಬಿಜೆಪಿಯವರೇ ನಿಮಗೆ ಮಹಿಳೆಯರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಸೌಮ್ಯಾರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರೆ ಭವ್ಯ ನರಸಿಂಹಮೂರ್ತಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಇದ್ದರು.