Bengaluru | ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿದ್ದ ದೈಹಿಕ ಶಿಕ್ಷಕನ ಬಂಧನ
ಬೆಂಗಳೂರು : ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿರುವ ಪ್ರಕರಣದಲ್ಲಿ ಖಾಸಗಿ ಶಾಲೆಯ ದೈಹಿಕ ಶಿಕ್ಷಕರೊಬ್ಬರನ್ನು(ಪಿಟಿ) ಇಲ್ಲಿನ ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಬಂಧಿತ ಶಿಕ್ಷಕರಾಗಿದ್ದಾರೆ.
ನಗರದ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ರಾಜೇಶ್ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಏಳನೆ ತರಗತಿಯ ವಿದ್ಯಾರ್ಥಿಗೆ ಕಪಾಳಕ್ಕೆ ಹೊಡೆದಿದ್ದರು.
ವಿದ್ಯಾರ್ಥಿ ಮಧ್ಯಾಹ್ನದ ವೇಳೆ ಶಾಲಾ ಕೊಠಡಿಯಲ್ಲಿ ತನ್ನ ಸ್ನೇಹಿತನ ಕುರ್ಚಿಯನ್ನು ಎಳೆದಿದ್ದರಿಂದ ಕೆಳಗೆ ಬಿದ್ದಿದ್ದ. ಈ ಕುರಿತು ಸಹಪಾಠಿಯು ನೇರವಾಗಿ ಶಿಕ್ಷಕ ರಾಜೇಶ್‍ಗೆ ದೂರು ನೀಡಿದ್ದ. ಈ ಹಿನ್ನೆಲೆ ಸ್ಟಾಫ್ ರೂಂಗೆ ಕರೆಸಿ ವಿದ್ಯಾರ್ಥಿಯ ಕಪಾಳಕ್ಕೆ ನಾಲ್ಕೆದು ಬಾರಿ ಹೊಡೆದಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿಯನ್ನು ಮನೆಗೆ ಕಳುಹಿಸದೆ ಸಂಜೆವರೆಗೂ ಶಾಲೆಯಲ್ಲಿಯೇ ಇರಿಸಿಕೊಂಡಿದ್ದರು.
ಸಂಜೆಯಾದರೂ ಮನೆಗೆ ಮಗ ಬರದಿರುವುದನ್ನು ಕಂಡು ಪೋಷಕರು ಶಾಲೆಗೆ ಬಂದಿದ್ದು, ತನ್ನ ಮಗನ ಕೆನ್ನೆ ಊದಿಕೊಂಡಿರುವುದನ್ನು ಕಂಡು ಕೂಡಲೇ ಪೋಷಕರು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವಿದ್ಯಾರ್ಥಿಯ ತಂದೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಅನ್ವಯ ಸದ್ಯ ರಾಜೇಶ್‍ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.