ಕೇರಳದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ : ಅಕ್ಕೈ ಪದ್ಮಶಾಲಿ ಖಂಡನೆ
ಬೆಂಗಳೂರು : ಶಬರಿಮಲೆ ದೇವಸ್ಥಾನಕ್ಕೆ ಬೆಂಗಳೂರಿನಿಂದ ತೆರಳಿದ್ದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲೆ ಕೇರಳ ಪೊಲೀಸರು ದೌರ್ಜನ್ಯ ಎಸೆಗಿರುವುದು ಖಂಡನೀಯ, ಈ ಸಂಬಂಧಿಸಿದಂತೆ ರಾಜ್ಯ ಸರಕಾರ ಮಧ್ಯ ಪ್ರವೇಶ ಮಾಡಬೇಕೆಂದು ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಒತ್ತಾಯಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಎಂಬ ಕಾರಣಕ್ಕಾಗಿ ಶಬರಿಮಲೆ ದೇವಸ್ಥಾನದ ಒಳಗೆ ಪ್ರವೇಶಿಸಲು ನಿರಾಕರಿಸಲಾಗಿದೆ ಎಂದು ಆರೋಪಿಸಿದರು.
ಅದರಲ್ಲೂ, ಪಾಂಬಾ ಪೊಲೀಸ್ ಠಾಣೆಯ ಅಧಿಕಾರಿಗಳು ಅವರನ್ನು ಬಟ್ಟೆ ಬಿಚ್ಚುವಂತೆ ಬಲವಂತ ಮಾಡಿದ್ದು ನಿನ್ನೆ ರಾತ್ರಿ ನಗ್ನಗೊಳಿಸಿ ಹೀನಾಯ ಕೃತ್ಯ ಎಸಗಿದ್ದಾರೆ. ಆಹಾರ ನೀಡದೆ ಹಿಂಸೆ ನೀಡಲಾಗುತ್ತಿದೆ ಎಂದು ಅವರು ದೂರಿದರು.
ಈ ಸಂಬಂಧಿಸಿದಂತೆ ಗೃಹ ಸಚಿವರು, ರಾಜ್ಯ ಸರಕಾರ ರಕ್ಷಣೆಗೆ ಧಾವಿಸಿ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಕ್ಕೈ ಪದ್ಮಶಾಲಿ ಒತ್ತಾಯ ಮಾಡಿದ್ದಾರೆ.