×
Ad

Bengaluru | 3.5 ಕೋಟಿ ಮೌಲ್ಯದ ಮಾದಕ ವಸ್ತು ವಶ; ಇಬ್ಬರ ಬಂಧನ

Update: 2026-01-06 19:52 IST

ಸಾಂದರ್ಭಿಕ ಚಿತ್ರ | PC : gemini AI

ಬೆಂಗಳೂರು : ಹೊಸ ವರ್ಷಾಚರಣೆಯ ಪಾರ್ಟಿಗೆಂದು ಮಾದಕ ವಸ್ತು ತಂದಿಟ್ಟಿದ್ದ ಎಂಬಿಎ ಪದವೀಧರ ಸೇರಿದಂತೆ ಇಬ್ಬರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 3.5 ಕೋಟಿ ರೂ. ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ವಶಪಡಿಸಿಕೊಂಡಿದ್ದಾರೆ.

ಬಾಣಸವಾಡಿ ನಿವಾಸಿ, ಎಂಬಿಎ ಪದವೀಧರ ಮೊಹಮದ್ ತಾರಿಖ್(34) ಹಾಗೂ ಕಾಡುಗೋಡಿ ನಿವಾಸಿ, ಶೇಖ್ ಅಹಮದ್ ಅರ್ಬಾಸ್ ಖಾನ್(29) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಮೊಹಮದ್ ತಾರಿಖ್ ಖಾಸಗಿ ಕಂಪೆನಿ ಯೊಂದರ ಉದ್ಯೋಗಿ. ಶೇಖ್ ಅಹಮದ್ ವೃತ್ತಿಯಲ್ಲಿ ಸೆಕೆಂಡ್‍ಹ್ಯಾಂಡ್ ಕಾರು ವ್ಯಾಪಾರಿ. ವಿದೇಶಿ ಪ್ರಜೆಯಿಂದ ಈ ಇಬ್ಬರು ಮಾದಕ ವಸ್ತು ಖರೀದಿಸಿ ಹೊಸ ವರ್ಷ ಚರಣೆಗೆ ತಂದಿದ್ದರು ಎಂಬುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

ಹೊಸ ವರ್ಷಾಚರಣೆಯ ಸಮಯದಲ್ಲಿ ಯುವಕರಿಗೆ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‍ಅನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಮಾಹಿತಿಯನ್ನಾಧರಿಸಿ ಎನ್‍ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ನಂತರ ಕಾರ್ಯಾಚರಣೆ ಕೈಗೊಂಡು ಡಿ.31ರಂದು ಹೊಸೂರು ರಸ್ತೆಯ ಹಿಂದೂ ಸ್ಮಶಾನದ ಬಳಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಆತನನ್ನು ವಿಚಾರಣೆಗೊಳಪಡಿಸಿದಾಗ, ಮತ್ತೊಬ್ಬ ಸಹಚರನೊಂದಿಗೆ ಸೇರಿಕೊಂಡು ಅಪರಿಚಿತ ವ್ಯಕ್ತಿಯಿಂದ ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್ ಅನ್ನು ಕಡಿಮೆ ಬೆಲೆಗೆ ಖರೀದಿಸಿದ್ದು ಹೊಸ ವರ್ಷಾಚರಣೆಯ ಸಮಯದಲ್ಲಿ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಈ ಕೃತ್ಯವೆಸಗಿರುವುದಾಗಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಎಂಬಿಎ ಪದವೀಧರನನ್ನು ಸುದೀರ್ಘ ವಿಚಾರಣೆ ನಡೆಸಿ, ಸ್ಮಶಾನದಲ್ಲಿರುವ ಸಮಾಧಿಯೊಂದರ ಪಕ್ಕದಲ್ಲಿ ಅಡಗಿಸಿಟ್ಟಿದ್ದ 2 ಕೆ.ಜಿ. 480 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈ ಆರೋಪಿಯು ನೀಡಿದ ಮಾಹಿತಿಯ ಮೇರೆಗೆ, ಆತನ ಸಹಚರನನ್ನು ಬೈಯಪ್ಪನಹಳ್ಳಿಯ ಮಲ್ಲೇಶ್ ಪಾಳ್ಯದಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ, ಕಾಡುಗೋಡಿಯ ಸೀಗೇಹಳ್ಳಿಯ ವಾಸದ ಮನೆಯಲ್ಲಿಟ್ಟಿದ್ದ 720 ಗ್ರಾಂ ಎಂಡಿಎಂಎ ಕ್ರಿಸ್ಟಲ್‍ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ 3.50 ಕೋಟಿ ರೂ. ಮೌಲ್ಯದ 3 ಕೆ.ಜಿ. 200 ಗ್ರಾಂ ಎಂಡಿಎಂಎ ಕ್ರಿಸ್ಟಲ್ ಹಾಗೂ ಕೃತ್ಯಕ್ಕೆ ಬಳಸಿದ 1 ದ್ವಿಚಕ್ರ ವಾಹನ ಹಾಗೂ 1 ಮೊಬೈಲ್‍ನನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಆತನ ಶೋಧ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News