Bengaluru | ತಂದೆ-ಮಗನ ಮೃತದೇಹಗಳು ಪತ್ತೆ; ಹತ್ಯೆ ಪ್ರಕರಣ ದಾಖಲು
ಬೆಂಗಳೂರು : ಮನೆಯಲ್ಲಿ ತಂದೆ ಮತ್ತು ಮಗನ ಮೃತದೇಹಗಳು ಪತ್ತೆಯಾದ ಘಟನೆ ಚಿಕ್ಕಬಾಣಾವರ ಠಾಣೆ ವ್ಯಾಪ್ತಿಯ ಗುಡ್ಡೆಬಸವಪುರದಲ್ಲಿ ನಡೆದಿದ್ದು, ಪತ್ನಿ ನೀಡಿದ ದೂರಿನ ಅನ್ವಯ ಹತ್ಯೆ ಪ್ರಕರಣ ದಾಖಲಾಗಿದೆ. ಮೃತಪಟ್ಟವರನ್ನು ಅಭಿನಂದನ್ (35) ಹಾಗೂ ಅವರ ಮಗ ಯದುವೀರ್ (5) ಎಂದು ಗುರುತಿಸಲಾಗಿದೆ.
ಕುಣಿಗಲ್ ಮೂಲದ ಅಭಿನಂದನ್ ಅವರು ತಮ್ಮ ಪತ್ನಿ ಹರಿಣಿ ಮತ್ತು ಮಗ ಯದುವೀರ್ ನೊಂದಿಗೆ ಗುಡ್ಡೆಬಸವಪುರದ ಮನೆಯಲ್ಲಿ ವಾಸಿಸುತ್ತಿದ್ದರು. ಪತಿ, ಪತ್ನಿ ಹಾಗೂ ಮಗ ಸಂಬಂಧಿಕರ ಮನೆಗೆ ತೆರಳಿ, ರವಿವಾರ ಸಂಜೆ ವಾಪಸಾಗಿದ್ದರು. ಸೋಮವಾರ ಬೆಳಿಗ್ಗೆ ಎದ್ದಾಗ ಪತಿ ಮತ್ತು ಮಗ ಸ್ಪಂದಿಸದೆ ಬಿದ್ದಿರುವುದು ಕಂಡು, ಪತ್ನಿ ಹರಿಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ದೇಹಗಳ ಮೇಲೆ, ಸಣ್ಣಪುಟ್ಟ ಗಾಯದ ಗುರುತುಗಳು ಪತ್ತೆಯಾಗಿವೆ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತಿಳಿಯಲಿದೆ. ದಂಪತಿಗಳಿಬ್ಬರ ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ಹತ್ಯೆ ಪ್ರಕರಣ ಎಂದು ಹರಿಣಿ ಅವರು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹತ್ಯೆ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಿದ್ದೇವೆ. ಮನೆಯಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಅದನ್ನು ಪರಿಶೀಲನೆ ಮಾಡಿದಾಗ ವಿಡಿಯೋಗಳು ಸರಿಯಾಗಿ ಸಿಗುತ್ತಿಲ್ಲ. ಉದ್ದೇಶಪೂರ್ವಕವಾಗಿ ಸಿಸಿಟಿವಿ ಸ್ಥಗಿತ ಮಾಡಲಾಗಿತ್ತೇ ಎಂಬುದರ ಬಗ್ಗೆಯೂ ತನಿಖೆ ಮಾಡಲಾಗುತ್ತಿದೆ ಎಂದು ಬೆಂಗಳೂರು ವಾಯುವ್ಯ ವಿಭಾಗದ ಡಿಸಿಪಿ ನಾಗೇಶ್ ಡಿ.ಎಲ್ ಪ್ರಕರಣದ ಕುರಿತಾಗಿ ಮಾಹಿತಿ ನೀಡಿದ್ದಾರೆ.