‘ಜೆನ್ ಝಿ’ಗಳ ಹೋರಾಟಕ್ಕೆ ಸರಕಾರ ಸ್ಪಂದಿಸುತ್ತಿಲ್ಲ: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು : ‘ಜೆನ್ ಝಿಗಳು ದೇಶದ ಭವಿಷ್ಯ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆದರೆ, ಕಾಂಗ್ರೆಸ್‍ನವರು ಅವರನ್ನು ದಾರಿ ತಪ್ಪಿಸುತ್ತಿದ್ದು, ತಮ್ಮ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದೇ ವೇಳೆ, ರಾಜ್ಯದಲ್ಲಿ ‘ಜೆನ್ ಝಿ’ಗಳು ಹೋರಾಟ ಮಾಡಿದರೆ ಅದಕ್ಕೆ ಸರಕಾರ ಸ್ಪಂದಿಸುತ್ತಿಲ್ಲ’ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.
ಶನಿವಾರ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪರೀಕ್ಷಾ ಅಕ್ರಮಗಳ ಬಗ್ಗೆ ಉತ್ತರ ಕೊಡಿ ಎಂದರೆ ಸರಕಾರ ಮೌನಕ್ಕೆ ಶರಣಾಗಿದೆ. ಇದು ಸರಿಯಲ್ಲ, ಈ ಬಗ್ಗೆ ಕೂಡಲೇ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಮೋದಿ ಆಡಳಿತದಲ್ಲಿ ಇಡೀ ವಿಶ್ವವೇ ಭಾರತದ ದೇಶದ ಕಡೆಗೆ ದಿಟ್ಟಿಸಿ ನೋಡುವಂತೆ ಬೆಳೆದಿದೆ. ಈ ಹಿಂದಿನ 65 ವರ್ಷಗಳಲ್ಲಿ ನಡೆಯದ ಅಭಿವೃದ್ಧಿ ಇಂದು ಆಗಿದೆ. ನಮ್ಮ ದೇಶದ ಈ ಪ್ರಗತಿಗೆ ಕಾರಣ ಮೋದಿ ಆಡಳಿತ. ಮೊದಲು ಚಿನ್ನವನ್ನು ಅಡವಿಟ್ಟು ದೇಶ ನಡೆಸಬೇಕಾದ ಸ್ಥಿತಿ ಇತ್ತು. ಆದರೆ, ಇಂದು ನಮ್ಮ ದೇಶ ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಎಂದು ಅವರು ಹೇಳಿದರು.
ಚಪಲ: ಕಾಂಗ್ರೆಸ್ ಪಕ್ಷದವರಿಗೆ ಆರೆಸ್ಸೆಸ್ ಟೀಕೆ ಮಾಡುವುದು ಚಪಲ. ಹೀಗೆ ನಿಂದನೆ ಮಾಡಿಯೇ ಆರೆಸ್ಸೆಸ್‍ಗೆ ಪ್ರಚಾರ ನೀಡುತ್ತಿದ್ದಾರೆ. ಆರೆಸ್ಸೆಸ್ ಇಲ್ಲದ ದಿನವನ್ನು ಊಹಿಸಲು ಸಾಧ್ಯವಿಲ್ಲ ಎಂದ ಅವರು, ನಮ್ಮ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಇದರ ಹಿಂದೆ ಸಾಕಷ್ಟು ಜನರ ತ್ಯಾಗ-ಬಲಿದಾನ ಅಡಗಿದೆ ಎಂದು ಸ್ಮರಿಸಿದರು.