×
Ad

ಬೆಂಗಳೂರು ಟರ್ಫ್ ಕ್ಲಬ್ ನೇಮಕಾತಿಯಲ್ಲಿ ಕಿಕ್‌ಬ್ಯಾಕ್ ಪಡೆದ ಆರೋಪ: ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್

Update: 2025-01-24 22:56 IST

ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರು ಟರ್ಫ್‌ ಕ್ಲಬ್‌ ವ್ಯವಸ್ಥಾಪಕ ಸಮಿತಿಯ 'ಸ್ಟೀವರ್ಡ್‌' ಹುದ್ದೆಗೆ ಆಪ್ತರೊಬ್ಬರನ್ನು ನಾಮನಿರ್ದೇಶನ ಮಾಡಲು 1.30 ಕೋಟಿ ರೂ.ಕಿಕ್‌ಬ್ಯಾಕ್‌‌ ಪಡೆದ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಿಎಂ ಸಿದ್ದರಾಮಯ್ಯಗೆ ಕ್ಲೀನ್‌ ಚಿಟ್‌ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣದ ತನಿಖೆ ಪೂರ್ಣಗೊಳಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ 'ಬಿ' ರಿಪೋರ್ಟ್‌ ಅನ್ನು ಜನಪ್ರತಿನಿಧಿಗಳ ನ್ಯಾಯಾಲಯ ಅಂಗೀಕರಿಸಿದೆ. ಸಿಎಂ ಸಿದ್ದರಾಮಯ್ಯ ಅವರು 1.30 ಕೋಟಿ ರೂ. ಕಿಕ್‌ ಬ್ಯಾಕ್‌ ಪಡೆದಿರುವುದಕ್ಕೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಜತೆಗೆ, ಎಲ್‌.ವಿವೇಕಾನಂದ ಅವರನ್ನು ಟರ್ಫ್‌ ಕ್ಲಬ್‌ ಸಮಿತಿಗೆ ನಾಮನಿರ್ದೇಶನ ಮಾಡುವಲ್ಲಿಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಬಗ್ಗೆಯೂ ಸೂಕ್ತ ಸಾಕ್ಷ್ಯಾಧಾರಗಳಿಲ್ಲ' ಎಂದು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಪ್ರಕರಣ ಸಂಬಂಧ ದೂರುದಾರರು ಹಾಗೂ ಸಿಎಂ ಸಿದ್ದರಾಮಯ್ಯ, ವಿವೇಕಾನಂದ ಸೇರಿದಂತೆ ಹಲವರ ಹೇಳಿಕೆಗಳನ್ನು ದಾಖಲಿಸಲಾಗಿದೆ. ಸಮಗ್ರ ತನಿಖಾ ವರದಿ ಹಾಗೂ ದಾಖಲೆಗಳ ಸಮೇತ ನ್ಯಾಯಾಲಯಕ್ಕೆ 'ಬಿ' ರಿಪೋರ್ಟ್‌ ಸಲ್ಲಿಸಲಾಗಿದೆ. ಇದನ್ನು ನ್ಯಾಯಾಲಯ ಅಂಗೀಕರಿಸಿದೆ.

2013 ಹಾಗೂ 2018 ರ ಮೇ 17 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು 1.30 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆದು ಎಲ್‌.ವಿವೇಕಾನಂದ ಅವರನ್ನು ಟರ್ಫ್‌ ಕ್ಲಬ್‌ನ ವ್ಯವಸ್ಥಾಪನಾ ಸಮಿತಿಗೆ (ಸ್ಟೀವರ್ಡ್‌ ಹುದ್ದೆ) ನಾಮನಿರ್ದೇ ಶನ ಮಾಡಿದ್ದಾರೆ. ಈ ಸಂಬಂಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಬಿಜೆಪಿ ಮುಖಂಡ ಎನ್‌.ಆರ್‌.ರಮೇಶ್‌ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ ಪೊಲೀಸರು, 2023 ರ ಜೂನ್ 7 ರಂದು ಮೊದಲ ಬಾರಿಗೆ 'ಬಿ' ರಿಪೋರ್ಟ್‌ ಸಲ್ಲಿಸಿದ್ದರು. ಈ ರಿಪೋರ್ಟ್‌ ತಿರಸ್ಕರಿಸಿದ್ದ ನ್ಯಾಯಾಲಯ, ಪ್ರಕರಣದ ಪುನರ್‌ ತನಿಖೆ ನಡೆಸಬೇಕೆಂದು 2024ರ ಫೆಬ್ರವರಿಯಲ್ಲಿಆದೇಶಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News