ದಲಿತ ಮುಖಂಡರೊಂದಿಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆ: ಎಸ್‍ಸಿ-ಎಸ್‍ಟಿ ವರ್ಗಗಳ ಬೇಡಿಕೆ ಪರಿಶೀಲಿಸುವ ಭರವಸೆ
ಬೆಂಗಳೂರು : ಮಾರ್ಚ್‍ನಲ್ಲಿ ಆಯವ್ಯಯ ಮಂಡಿಸಲು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದು, ಮಂಗಳವಾರ ವಿಧಾನಸೌಧದ ಮೂರನೇ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ದಲಿತ ಮುಖಂಡರೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಿ, ಅವರ ನ್ಯಾಯಯುತ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.
ಈಗಾಗಲೇ ಒಂದು ತಿಂಗಳಿನಿಂದ ವಿವಿಧ ಸಮುದಾಯಗಳು, ಸಂಘ-ಸಂಸ್ಥೆಗಳು ಹಾಗೂ ಮುಖಂಡರುಗಳೊಂದಿಗೆ ಹಲವು ಸಭೆಗಳನ್ನು ನಡೆಸಿ ಬೇಡಿಕೆಗಳು, ಸಲಹೆಗಳನ್ನು ಆಲಿಸುತ್ತಿರುವ ಸಿದ್ದರಾಮಯ್ಯ ಅವರು ತಮ್ಮ 16ನೆ ಬಜೆಟ್ ಮಂಡಿಸಲು ಅನಾರೋಗ್ಯದ ನಡುವೆಯೂ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.
ದಲಿತ ಮುಖಂಡರೊಂದಿಗಿನ ಸಭೆಯ ವೇಳೆ ಮಾತನಾಡಿದ ಸಿದ್ದರಾಮಯ್ಯ, ದಲಿತ ಸಮುದಾಯದ ಗುತ್ತಿಗೆದಾರರಿಗೆ ಒಂದು ಕೋಟಿ ರೂ.ಗಳವರೆಗಿನ ಗುತ್ತಿಗೆಯಲ್ಲಿ ಮೀಸಲಾತಿ ಜಾರಿಗೆ ತಂದಿದ್ದು, ಇದನ್ನು 2 ಕೋಟಿ ರೂ.ಗೆ ವಿಸ್ತರಿಸಬೇಕು ಎನ್ನುವ ಬೇಡಿಕೆ ಬಗ್ಗೆಯೂ ಪರಿಶೀಲಿಸುವುದಾಗಿ ತಿಳಿಸಿದರು.
ಶೋಷಿತರ, ದಲಿತ ಸಮಯದಾಯಗಳ ಬೇಡಿಕೆಗಳನ್ನು ನಾನು ಮುಖ್ಯಮಂತ್ರಿ ಆದ ಬಳಿಕ ನಿರಂತರವಾಗಿ ಈಡೇರಿಸುತ್ತಲೇ ಇದ್ದೇನೆ. ದಲಿತರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನ ಅಭಿವೃದ್ಧಿ ಹಣದಲ್ಲಿ ಶೇ.24ರಷ್ಟು ಹಣ ಮೀಸಲಾಗಿಡುವ ಕಾಯ್ದೆ ಜಾರಿ ಮಾಡಿದ್ದು ನಮ್ಮ ಸರಕಾರ. ಈ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರಕಾರವಾಗಲಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ ಜಾರಿ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬಡ್ತಿಯಲ್ಲಿ ಮೀಸಲಾತಿ, ಪಿಟಿಸಿಎಲ್ ಕಾಯ್ದೆ ಮಾಡಿದ್ದು, ಹೊಸದಾಗಿ ಕೈಗಾರಿಕೆ ಆರಂಭಿಸುವವರಿಗೆ ಸಾಕಷ್ಟು ಸವಲತ್ತುಗಳನ್ನು ಕಲ್ಪಿಸಿದ್ದೇವೆ. ಇಡೀ ದೇಶಕ್ಕೆ ಮಾದರಿಯಾದ ಕಾಯ್ದೆ, ಕಾನೂನು, ನಿಯಮಗಳನ್ನು ಮಾಡಿರುವ ದಾಖಲೆ ನಮ್ಮ ಸರಕಾರದ್ದಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸಭೆಯಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ 1 ಸಾವಿರ ಕೋಟಿ ರೂ. ನೀಡಬೇಕು. ಅದರಲ್ಲಿ ಮೂಲ ಸೌಕರ್ಯಕ್ಕೆ 400 ಕೋಟಿ ರೂ., ಖಾಸಗಿ ಎಸ್‍ಸಿ/ಎಸ್‍ಟಿ ಸ್ಲಂಗಳ ಸ್ವಾಧೀನಕ್ಕೆ 200 ಕೋಟಿ ರೂ., 50 ಮಾದರಿ ಸ್ಲಂಗಳ ಅಭಿವೃದ್ದಿಗೆ 200 ಕೋಟಿ ರೂ., ಸ್ಲಂ ಬೋರ್ಡ್ ಸುವರ್ಣ ಮಹೋತ್ಸವದ ನೆನಪಿಗಾಗಿ ಹಳೇ ವಸತಿ ಸಮುಚ್ಚಯಗಳ ನವೀಕರಣಕ್ಕೆ 200 ಕೋಟಿ ರೂ. ನೀಡಬೇಕು. ಸ್ಲಂ ಜನರಿಗೆ ಪ್ರತ್ಯೇಕ ಸಚಿವಾಲಯ ಘೋಷಣೆ ಮಾಡಬೇಕು ಎಂದು ದಲಿತ ಮುಖಂಡರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಸಚಿವರಾದ ಎಚ್.ಸಿ.ಮಹಾದೇವಪ್ಪ, ಕೆ.ಎನ್.ರಾಜಣ್ಣ, ಕೆ.ಎಚ್.ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಸಿಎಂ ಅಪರ ಮುಖ್ಯ ಕಾರ್ಯದರ್ಶಿ. ಎಲ್.ಕೆ.ಅತೀಕ್ ಸೇರಿದಂತೆ ಹಲವು ದಲಿತ ಮುಖಂಡರು ಉಪಸ್ಥಿತರಿದ್ದರು.
ಒಳ ಮೀಸಲಾತಿಗೆ ಪಟ್ಟು: ದಲಿತ ಮುಖಂಡರುಗಳೊಂದಿಗಿನ ಬಜೆಟ್ ಪೂರ್ವ ಸಭೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಸಿದ್ದರಾಮಯ್ಯ ಎದುರು ಕೂಡಲೇ ಒಳಮೀಸಲಾತಿ ಜಾರಿಗಾಗಿ ಪಟ್ಟು ಹಿಡಿದರು. ಒಳ ಮೀಸಲಾತಿಯಾಗುವವರೆಗೂ ಯಾವುದೇ ನೇಮಕಾತಿ ಮಾಡುವುದಿಲ್ಲ ಎಂದು ಹೇಳಿದ ಸರಕಾರ ಒಳಗೊಳಗೆ 36 ಸಾವಿರ ಹುದ್ದೆಗಳನ್ನು ತುಂಬಲು ಉನ್ನಾರ ನಡೆಸುತ್ತಿದೆ. ಪರಿಶಿಷ್ಟ ಜಾತಿಗೆ ಕಾಂಗ್ರೆಸ್ ಸರಕಾರ ಒಳ ಮೀಸಲಾತಿ ಮಾಡುತ್ತೇವೆ ಎಂದು ಹೇಳಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‍ದಾಸ್ ಅವರಿಗೆ ಕೊಟ್ಟ ಅವಧಿಯು ಮುಗಿದುಹೋಗಿದೆ ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆ ಸತ್ತು 15 ವರ್ಷಗಳಾಗಿವೆ: ‘ಮಾದಿಗ ಸಮುದಾಯದ ಪಾಲಿಗೆ ಸಮಾಜ ಕಲ್ಯಾಣ ಇಲಾಖೆ ಸತ್ತು 15 ವರ್ಷಗಳಾಗಿವೆ. ಎಲ್ಲ ಯೋಜನೆಗಳಿಂದಲೂ ಮಾದಿಗ ಸಮುದಾಯ ಇಲಾಖೆಯಿಂದ ದೂರ ಉಳಿದಿದೆ. ಇದುವರೆಗೂ ಸಮಾಜ ಕಲ್ಯಾಣ ಸಚಿವರು ಮಾದಿಗ ಮುಖಂಡರ ಒಂದು ಸಭೆಯು ಆಯೋಜಿಸಿಲ್ಲ. ಈ ಇಲಾಖೆಯ ಎಲ್ಲ ನಿಗಮ ಮಂಡಳಿಗಳ ಯೋಜನೆಗಳೆಲ್ಲವೂ ಸ್ಥಗಿತಗೊಂಡಿವೆ. ಈ ಬಾರಿಯ ಬಜೆಟ್‍ನಲ್ಲಿ ನಿಗಮಗಳಿಗೆ ಕನಿಷ್ಠ 1ಸಾವಿರ ಕೋಟಿ ರೂ. ಮೀಸಲಿಡಬೇಕು. ಅಲ್ಲದೆ, ಈ ಕೂಡಲೇ ಮಾದಿಗ ಮುಖಂಡರ ಸಭೆ ಕರೆಯಬೇಕು’ ಎಂದು ಸಿಎಂಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಕೇಶವಮೂರ್ತಿ ಒತ್ತಾಯಿಸಿದರು.