ಪ್ರತಿವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿವರ್ಷ ವಿಧಾನಸೌಧದ ಆವರಣದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಗುರುವಾರ ಇದೇ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ವತಿಯಿಂದ ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ಇಂದಿನಿಂದ ಮಾ.3ರ ವರೆಗೆ ಹಮ್ಮಿಕೊಂಡಿರುವ ಪುಸ್ತಕ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಮತ್ತು ಸಾಹಿತ್ಯದ ಓದು ಮನುಷ್ಯನನ್ನು ಹೆಚ್ಚೆಚ್ಚು ಮಾನವೀಯಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರು ಓದುವ ಅಭ್ಯಾಸ ಹೆಚ್ಚಿಸಿಕೊಳ್ಳಿ ಎಂದು ಕರೆ ನೀಡಿದರು.
ವಿಧಾನಸೌಧದಲ್ಲಿ ಓದುಗರ, ಸಾಹಿತ್ಯಾಸಕ್ತರ ಹಬ್ಬ ಏರ್ಪಡು ಮಾಡಲಾಗಿದೆ. ಇದನ್ನು ಸಾಹಿತ್ಯಾಸಕ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಇದೊಂದು ಒಳ್ಳೆಯ ಬೆಳವಣಿಗೆ ಆಗಿದ್ದು, ಮುಂದೆ ಪ್ರತೀ ವರ್ಷ ವಿಧಾನಸೌಧದಲ್ಲಿ ಸಾಹಿತ್ಯ, ಪುಸ್ತಕ ಹಬ್ಬ ನಡೆಸಲಾಗುವುದು. ಜತೆಗೆ, ಪುಸ್ತಕಗಳನ್ನು ಖರೀದಿಸಿ, ಮನೆ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಿ.ಇದರಿಂದ ಮಕ್ಕಳು ಮೊಬೈಲ್ ಮತ್ತು ಡಿಜಿಟಲ್ ಚಟದಿಂದ ಹೊರಗೆ ಬರಲು ಸಹ ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಿಧಾನಸೌಧ ಆವರಣದಲ್ಲಿ ಪುಸ್ತಕ ಮೇಳ ಮಾಡುವ ಮೂಲಕ ಸ್ಪೀಕರ್ ಯು.ಟಿ.ಖಾದರ್ ಹೊಸ ಅಧ್ಯಾಯವನ್ನು ಹುಟ್ಟುಹಾಕಿರುವುದು ಒಳ್ಳೆಯ ಬೆಳವಣಿಗೆ ಆಗಿದೆ. ಇಂತಹ ಕಾರ್ಯಕ್ರಮಗಳಿಂದ ಜ್ಞಾನ, ಸಾಹಿತ್ಯದ ವ್ಯಾಪ್ತಿ ಹೆಚ್ಚಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಮಾತನಾಡಿ, ಸಾಹಿತಿಗಳನ್ನು ಗುರುತಿಸಿ ಸನ್ಮಾನ ಮಾಡಿದರೆ, ಪ್ರೋತ್ಸಾಹ ಮಾತ್ರವಲ್ಲದೆ ಉಪಕಾರ ಮಾಡಿದಂತೆ. ಅದರಂತೆ ರಾಜ್ಯ ಸರಕಾರ ಇಂತಹ ಕಾರ್ಯಕ್ರಮಕ್ಕೆ ಮುಂದಾಗಿರುವುದು ಸ್ವಾಗತರ್ಹ ಎಂದು ನುಡಿದರು.
ಗೋವಾ ಮೂಲದ ಹಿರಿಯ ಸಾಹಿತಿ, ಜ್ಞಾನಪೀಠ ಪುರಸ್ಕೃತ ದಾಮೋದರ್ ಮೌಜೋ ಮಾತನಾಡಿ, ಭಾಷಾ ವ್ಯಾಪ್ತಿಯನ್ನು ಮೀರಿ ಸಾಹಿತ್ಯವನ್ನು ತಿಳಿದುಕೊಳ್ಳಲು ಮುಂದಾಗಬೇಕು. ಸದಾ ರಾಜಕೀಯ ಚಟುವಟಿಕೆಗಳಿಂದ ಕೂಡಿರುವ ವಿಧಾನಸೌಧ ಆವರಣದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಾಹಿತ್ಯ ಆಸಕ್ತ ಕಾರ್ಯಕ್ರಮ ರೂಪಿಸಿರುವುದು ಎಲ್ಲ ರಾಜ್ಯಗಳಿಗೂ ಮಾದರಿಯ ನಡೆ ಎಂದು ಶ್ಲಾಘಿಸಿದರು.
ಇದೇ ವೇಳೆ, ಹಿರಿಯ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರ, ಗೋವಾದ ದಾಮೋದರ್ ಮೌಜೋ, ಬೋಳವಾರು ಮುಹಮ್ಮದ್ ಕುಂಞ ಸೇರಿದಂತೆ ಹಿರಿಯ ಸಾಹಿತಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ, ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್, ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕರಾದ ರಾಜುಗೌಡ, ರಿಝ್ವಾನ್ ಅರ್ಶದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.