×
Ad

ರಾಜ್ಯದ ಆರ್ಥಿಕತೆಯ ಬೆಳವಣಿಗೆ ಶೇ.7.4ರಷ್ಟು ದಾಖಲು : ಸಿಎಂ ಸಿದ್ದರಾಮಯ್ಯ

Update: 2025-03-07 17:46 IST

ಬೆಂಗಳೂರು : ಕರ್ನಾಟಕ ರಾಜ್ಯವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದು, ದೇಶದ ಜಿಡಿಪಿಗೆ ಶೇ.8.4ರಷ್ಟು ಕೊಡುಗೆ ನೀಡಿದೆ. 2024-25ನೇ ಸಾಲಿನಲ್ಲಿ ರಾಜ್ಯದ ಆರ್ಥಿಕತೆಯ ಬೆಳವಣಿಗೆಯು ಶೇ.7.4ರಷ್ಟು ದಾಖಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ತಾವು ಮಂಡಿಸಿದ 2025-26ನೇ ಸಾಲಿನ ರಾಜ್ಯ ಬಜೆಟ್ ಭಾಷಣದಲ್ಲಿ ರಾಜ್ಯದ ಆರ್ಥಿಕತೆಯ ಬಗ್ಗೆ ಉಲ್ಲೇಖಿಸಿದ ಅವರು, ಇದೇ ಅವಧಿಯಲ್ಲಿ ದೇಶದ ಆರ್ಥಿಕತೆಯು ಶೇ.6.4ರಷ್ಟು ಬೆಳವಣಿಗೆಯಾಗಿದೆ. ರಾಜ್ಯವು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕತೆಗಿಂತ ಹೆಚ್ಚಾಗಿದೆ ಎಂದು ಹೇಳಿದರು.

ಕಳೆದ ವರ್ಷದಲ್ಲಿ ಶೇ.-4.9 ರಷ್ಟು ಬೆಳವಣಿಗೆ ದಾಖಲಾಗಿದ್ದ ಕೃಷಿ ವಲಯವು, 2024-25ರಲ್ಲಿ ಶೇ.4ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಚೇತರಿಕೆ ಕಂಡಿದ್ದು, ದೇಶದ ಕೃಷಿ ವಲಯದ ಬೆಳವಣಿಗೆ ಶೇ.3.8ಕ್ಕಿಂತ ಹೆಚ್ಚಾಗಿದೆ. ರಾಜ್ಯ ಸರಕಾರವು ರೈತರ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ವಿವಿಧ ಇಲಾಖೆಗಳಿಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 51,339 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ರಾಜ್ಯ ಸರಕಾರವು ಕೈಗಾರಿಕಾ ನೀತಿ 2025-30ಕ್ಕೆ ಚಾಲನೆ ನೀಡಿದ್ದು, ಇದು 2030ರ ವೇಳೆಗೆ ಉತ್ಪಾದನಾ ವಲಯದಲ್ಲಿ ಶೇ.12ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ 20 ಲಕ್ಷ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ. 2024-25ನೇ ಸಾಲಿನಲ್ಲಿ ಕೈಗಾರಿಕಾ ವಲಯವು ಶೇ.5.8ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಒಟ್ಟು 13,692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನವನ್ನು ಒದಗಿಸಲು ಸರಕಾರವು ಸಮ್ಮತಿಸಿದೆ. 2024-25ನೇ ಸಾಲಿಗೆ ರಾಜ್ಯದಲ್ಲಿ ಸೇವಾ ವಲಯವು ಗಣನೀಯವಾಗಿ ಬೆಳವಣಿಗೆಯಾಗಿದ್ದು, ಶೇ.8.9 ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2 ಕ್ಕಿಂತ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲು ಸರಕಾರವು ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನಸೇರಿದಂತೆ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಹಲವು ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವುದರ ಜೊತೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಉತ್ತೇಜಿಸಲಿವೆ. ಈ ನೀತಿಗಳಿಂದ ರಾಜ್ಯದಲ್ಲಿ ಅಂದಾಜು ಒಂದು ಲಕ್ಷ ಕೋಟಿ ರೂ.ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಈ ಉದ್ದೇಶಕ್ಕೆ ಸರಕಾರವು 13,500 ಕೋಟಿ ರೂ.ಸಹಾಯಧನ ಮತ್ತು ಆರ್ಥಿಕ ನೆರವು ನೀಡಲು ಸಹಮತಿಸಿದೆ ಎಂದು ಅವರು ಹೇಳಿದರು.

ರಾಜ್ಯದ ಹಣಕಾಸು ಪರಿಸ್ಥಿತಿ: 15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ತೆರಿಗೆ ಪಾಲು ಶೇ.4.713 ರಿಂದ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.647ಕ್ಕೆ ಇಳಿಕೆಯಾಯಿತು. ಇದರಿಂದಾಗಿ ರಾಜ್ಯದ ತೆರಿಗೆ ಹಂಚಿಕೆಯು ಶೇ.23ರಷ್ಟು ಕುಸಿತವಾಗಿ, ರಾಜ್ಯವು ವಾರ್ಷಿಕ ಅಂದಾಜು 12 ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು ಎಂದು ಮುಖ್ಯಮಂತ್ರಿ ತಿಳಿಸಿದರು.

ಅಲ್ಲದೆ, 15ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 5,495 ಕೋಟಿ ರೂ.ಗಳ ವಿಶೇಷ ಅನುದಾನ, ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆಗಾಗಿ 3,000 ಕೋಟಿ ರೂ. ಮತ್ತು ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಸೇರಿ ಒಟ್ಟು 11,495 ಕೋಟಿ ರೂ.ಗಳನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು. ಆದರೆ, ಕೇಂದ್ರ ಸರಕಾರ ಈ ಅನುದಾನವನ್ನು ಬಿಡುಗಡೆ ಮಾಡಿಲ್ಲ. 2023-24ನೇ ಸಾಲಿನ ಕೇಂದ್ರ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿದರೂ ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಕನಿಷ್ಠ ಶೇ.50ರಷ್ಟು ಪಾಲನ್ನು ರಾಜ್ಯಗಳಿಗೆ ನೀಡಬೇಕು ಎಂದು ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೇಂದ್ರ ಸರಕಾರ ವಿಧಿಸುವ ಸೆಸ್ ಮತ್ತು ಸರ್‍ಚಾರ್ಜ್‍ಗಳನ್ನು ಒಟ್ಟು ತೆರಿಗೆ ರಾಜಸ್ವದ ಶೇ.5ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸೆಸ್ ಮತ್ತು ಸರ್‍ಚಾರ್ಜ್‍ಗಳನ್ನು ವಿಧಿಸಿದರೆ, ಹೆಚ್ಚಿನ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸಬೇಕು ಎಂದು ಒತ್ತಾಯಿಸಿರುವುದಾಗಿ ಅವರು ಹೇಳಿದರು.

ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ, ಒಟ್ಟು ತೆರಿಗೆ ಹಂಚಿಕೆಯಲ್ಲಿ ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ಶೇ.60ರಷ್ಟು ಪಾಲನ್ನು ಮರಳಿಸಬೇಕು. ಆದುದರಿಂದ, ಹಂಚಿಕೆಯಾಗುವ ತೆರಿಗೆಯಲ್ಲಿ ಇತರೆ ರಾಜ್ಯಗಳ ಪಾಲನ್ನು ಶೇ.40ಕ್ಕೆ ಮಿತಿಗೊಳಿಸಬೇಕು ಎಂದು ನಾವು 16ನೇ ಹಣಕಾಸು ಆಯೋಗಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಈ ಸವಾಲುಗಳ ನಡುವೆಯೂ, ರಾಜ್ಯ ಸರಕಾರದ ಸಂಪನ್ಮೂಲ ಕ್ರೊಢೀಕರಣ ಕ್ರಮಗಳಿಂದ 2024-25ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು ವಾರ್ಷಿಕ ಶೇ.10.3 ರಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ. 2024-25ನೇ ಸಾಲಿಗೆ ತೆರಿಗೆಯೇತರ ರಾಜಸ್ವದಲ್ಲಿ 14,500 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆಯಿದ್ದು, ಆಯವ್ಯಯ ಗುರಿಗಿಂತ ಹೆಚ್ಚು ಸಂಗ್ರಹವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತೆರಿಗೆಯೇತರ ರಾಜಸ್ವವು ವರ್ಷವಾರು ಶೇ.10.5ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಆದರೂ ಜಿ.ಎಸ್.ಡಿ.ಪಿ.ಯ ಶೇಕಡಾವಾರು ಪರಿಗಣಿಸಿದಾಗ ತೆರಿಗೆಯೇತರ ಸಂಪನ್ಮೂಲ ಹೆಚ್ಚಳಕ್ಕೆ ವಿಪುಲ ಅವಕಾಶಗಳಿವೆ. ಸಂಪನ್ಮೂಲ ಕ್ರೊಢೀಕರಣಕ್ಕಾಗಿ ರಾಜ್ಯ ಸರಕಾರವು ‘ಸಂಪನ್ಮೂಲ ಕ್ರೊಢೀಕರಣ ಸಮಿತಿ’ಯನ್ನು ರಚನೆ ಮಾಡಿದೆ. ಈ ಸಮಿತಿಯು ಮಧ್ಯಂತರ ವರದಿ ನೀಡಿದ್ದು, ಅದರ ಶಿಫಾರಸ್ಸಿನ ಅನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗಾಗಿ ‘ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ’ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು. ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು. ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ‘ಬಿ’ ಮತ್ತು ‘ಸಿ’ ವೃಂದಗಳಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಪ್ರಕ್ರಿಯೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ಬಾಕ್ಸ್............

ಗ್ಯಾರಂಟಿಗಳಿಗಾಗಿ 51,034 ಕೋಟಿ ರೂ.: ‘ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಒದಗಿಸಲಾಗಿದೆ. ಕಳೆದ ಎರಡು ಆಯವ್ಯಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುμÁ್ಠನ ಮಾಡುವುದರ ಜೊತೆಗೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ.ಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿ. ಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿದೆ’

-ಸಿದ್ದರಾಮಯ್ಯ, ಮುಖ್ಯಮಂತ್ರಿ

(ಅಮ್ಜದ್)

……………………………….

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News