ಸಂವಿಧಾನ ಈ ದೇಶದ ಆತ್ಮ, ಅದನ್ನು ರಕ್ಷಿಸಿಕೊಳ್ಳಬೇಕು : ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ʼಸಂವಿಧಾನ ಈ ದೇಶದ ಆತ್ಮ. ಸಂವಿಧಾನ ಇಲ್ಲದೇ ಹೋದರೆ ಈ ದೇಶಕ್ಕೆ ಆತ್ಮವೇ ಇರುವುದಿಲ್ಲ. ಇದನ್ನು ನಾವು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕುʼ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ನಂತರ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಬಳಿಕ ಎರಡನೇ ಬಾರಿಗೆ ಪಕ್ಷದ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ್ದಾರೆ. ಜನವರಿ 26 ಸಂವಿಧಾನವನ್ನು ಅನುಷ್ಠಾನಕ್ಕೆ ತಂದ ಪವಿತ್ರವಾದ ದಿನ. ಒಕ್ಕೂಟ ವ್ಯವಸ್ಥೆ ಜಾರಿಯಾದ ದಿನ. ಎಲ್ಲಾ ಭಾಷೆ, ಧರ್ಮ, ಜಾತಿಗಳು ಒಂದೇ ಎಂದು ಸಾರಿದ ದಿನ ಎಂದು ಹೇಳಿದರು.
ಸಾಮಾಜಿಕ ನ್ಯಾಯ, ಸಮಾನತೆಗಾಗಿ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿದ್ದಾರೆ. ಸಂವಿಧಾನದ ಅಗತ್ಯತೆ ಬಗ್ಗೆ ಅಂಬೇಡ್ಕರ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ವಿಶ್ವದ ಅನೇಕ ರಾಷ್ಟ್ರಗಳು ನಮ್ಮ ಸಂವಿಧಾನವನ್ನು ಶ್ರೇಷ್ಠ ಎಂದು ಮಾದರಿಯಾಗಿ ಪರಿಗಣಿಸಿವೆ. ಸಂವಿಧಾನದ ಆರ್ಟಿಕಲ್ 14 ಮತ್ತು 18 ಸಮಾನತೆ ಬಗ್ಗೆ ಹೇಳುತ್ತದೆ. ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳುತ್ತದೆ. ಇದು ಕೇವಲ ಪುಸ್ತಕವಲ್ಲ. ಪ್ರತಿಯೊಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಗೌರವ, ಸಮಾಜದ ಗೌರವ ಹಾಗೂ ದೇಶದ ಗೌರವ ಕಾಪಾಡಿಕೊಂಡು ಹೋಗಬೇಕು ಎಂಬುದನ್ನು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ತಿಳಿಸಿದ್ದಾರೆ ಎಂದರು.
ಕಾಂಗ್ರೆಸ್ ಈ ದೇಶಕ್ಕೆ ಸ್ವಾತಂತ್ರ್ಯದ ಜತೆಗೆ, ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಕೊಡುಗೆಯಾಗಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಖರ್ಗೆ ಅವರು ಹೇಳಿದಂತೆ ಈ ಸಂವಿಧಾನ ಉಳಿಸಿ, ಬೆಳೆಸಿಕೊಂಡು ಹೋಗಬೇಕು. ಸಂವಿಧಾನಕ್ಕೆ ಆಗುತ್ತಿರುವ ಅಪಮಾನದ ವಿರುದ್ಧ ಹೋರಾಟ ಮಾಡಬೇಕು ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ :
ನಾವು ಬೆಳಗಾವಿಯಲ್ಲಿ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಮಾಡಿದ್ದೇವೆ. ಎಐಸಿಸಿಯ ಈ ಕಾರ್ಯಕ್ರಮವನ್ನು ಇಡೀ ವರ್ಷ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಾವೇಶ ನಡೆಸಬೇಕು ಎಂದು ನಮ್ಮ ಅಧ್ಯಕ್ಷರಲ್ಲಿ ನಾನು ಮನವಿ ಮಾಡಿದ್ದೆ. ಇದು ಕೇವಲ ಕಾಂಗ್ರೆಸ್ ಕಾರ್ಯಕ್ರಮ ಅಲ್ಲ. ಸಮಾಜದ ಎಲ್ಲಾ ವರ್ಗಗಳ ಕಾರ್ಯಕ್ರಮ. ಹೀಗಾಗಿ ಇದು ಸರ್ಕಾರದ ಕಾರ್ಯಕ್ರಮವಾಗಬೇಕು ಎಂದು ಪಕ್ಷದ ವತಿಯಿಂದ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಆ ಮೂಲಕ ಬಾಪು ಅವರ ತತ್ವ, ಅಂಬೇಡ್ಕರ್ ಅವರ ಮೌಲ್ಯಗಳು, ನಮ್ಮ ಸಂವಿಧಾನ ಕಾಪಾಡುವ ಕೆಲಸ ಮಾಡಬೇಕು. ಇವುಗಳ ಬಗ್ಗೆ ಶಾಲಾ-ಕಾಲೇಜು ಮಟ್ಟದಲ್ಲಿ ವ್ಯಾಪಕ ಚರ್ಚೆಯಾಗಬೇಕು ಎಂದು ಹೇಳಿದರು.
ರಾಜ್ಯದ 224 ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಲು ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲೂ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಇಡೀ ವರ್ಷ ನಡೆಯುವ ದಿನಾಂಕ ನಿಗದಿ ಮಾಡಲಾಗುವುದು. ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷ, ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳು ಪೂರ್ಣಗೊಂಡಿವೆ. ಈ ಹಿನ್ನೆಲೆಯಲ್ಲಿ ನಾಳೆ ಎಐಸಿಸಿ ವತಿಯಿಂದ ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ದೇಶದ ಸ್ವಾತಂತ್ರ್ಯಕ್ಕೆ ತ್ಯಾಗ ಬಲಿದಾನ ಮಾಡಿರುವ ಎಲ್ಲರನ್ನು ಸ್ಮರಿಸುವ ಕೆಲಸ ಮಾಡಲಾಗುವುದು ಎಂದರು.